ADVERTISEMENT

ಸಾಲು ಸಾಲು ಸಮಸ್ಯೆಗಳ ಗೊರವನಹಳ್ಳಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 5:50 IST
Last Updated 22 ಸೆಪ್ಟೆಂಬರ್ 2011, 5:50 IST

ಮದ್ದೂರು: ಈ ಗ್ರಾಮದಲ್ಲಿ ಪ್ರಸ್ತುತ ಎಂಟು ಮಂದಿ ಗ್ರಾಮ ಪಂಚಾಯಿತಿ ಮತ್ತು ಒಬ್ಬರು ತಾಲ್ಲೂಕು ಪಂಚಾಯಿತಿ ಸದಸ್ಯರಿದ್ದಾರೆ. ಆದರೂ, ಸಾಲುಸಾಲು ಸಮಸ್ಯೆಗಳು ಈ ಗ್ರಾಮವನ್ನು ಕಾಡುತ್ತಿವೆ. ಸಮಗ್ರ ಅಭಿವೃದ್ಧಿ ಮಾತು ಇರಲಿ, ಕನಿಷ್ಠ ಮೂಲ ಸೌಕರ್ಯಗಳೇ ಇಲ್ಲಿಲ್ಲ.

-ಇದು ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಗೊರವನಹಳ್ಳಿ ಗ್ರಾಮದ ಸ್ಥಿತಿ. ಕುಡಿಯುವ ನೀರಿಗೆ ಹಾಹಾಕಾರ. ಹೂಳು ತುಂಬಿದ ಚರಂಡಿಗಳು. ರಸ್ತೆಯಲ್ಲೇ ಹರಿಯುವ ಚರಂಡಿ ನೀರು. ನೈರ್ಮಲ್ಯದ ಕೊರತೆ. ಡಾಂಬರು ಕಾಣದ ಬೀದಿಗಳು. ರಸ್ತೆ ಬದಿಯಲ್ಲಿಯೇ ಸಾಲು ಸಾಲು ತಿಪ್ಪೆಗಳು ಕಾಣಸಿಗುತ್ತವೆ.

ಗ್ರಾಮದಲ್ಲಿ ಸುಮಾರು 4 ಸಾವಿರ ಜನಸಂಖ್ಯೆಯಿದ್ದು, 2,800ಕ್ಕೂ ಹೆಚ್ಚು ಮಂದಿ ಮತದಾರರಿದ್ದಾರೆ. ಗ್ರಾಮ ಪಂಚಾಯಿತಿ ಕೇಂದ್ರ ಕಚೇರಿ ಹೊಂದಿದ್ದರೂ, ಈ ಗ್ರಾಮದಲ್ಲಿ ಅಭಿವೃದ್ಧಿ ಎನ್ನುವುದು ಮಾತ್ರ ಕನಸಾಗಿಯೇ ಉಳಿದಿದೆ.

ಇಲ್ಲಿನ ಗ್ರಾ.ಪಂ.ಗೆ ಕಳೆದ ಆರ್ಥಿಕ ವರ್ಷ ರೂ. 6 ಲಕ್ಷ ಅನುದಾನ ಬಂದಿದ್ದು, ಬಹುತೇಕ ಹಣ ವಿದ್ಯುತ್ ಬಿಲ್ ಬಾಕಿಗೆ ಸಂದಾಯವಾಗಿದೆ. ಉಳಿದ, ರೂ.1.20 ಲಕ್ಷ ಹಣದಲ್ಲಿ ಸಿಬ್ಬಂದಿಗೆ ಸಂಬಳ ನೀಡಿದರೆ ಸಾಕು ಎನ್ನುವ ಪರಿಸ್ಥಿತಿ. ಇನ್ನು, ಅಭಿವೃದ್ಧಿ ಕೆಲಸ ಕೈಗೊಳ್ಳುವುದು ಹೇಗೆ? ಎಂಬ ಚಿಂತೆ.

ಈ ನಡುವೆ ಈ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ 1 ಕೋಟಿ ರೂಪಾಯಿ ಬಿಡುಗಡೆ ಆಗಿದೆ. 50 ಲಕ್ಷ ರೂಪಾಯಿ ಕಾಮಗಾರಿ ಮುಗಿದಿದೆ ಎಂದು ದಾಖಲೆ ಹೇಳುತ್ತಿದೆ. ಆದರೆ ಗ್ರಾಮದ ಬಹುತೇಕ ಬೀದಿಗಳಿಗೆ ಚರಂಡಿ ಸೌಲಭ್ಯವಿಲ್ಲ. ರಸ್ತೆಗಳಂತೂ ಡಾಂಬರು ಕಂಡಿಲ್ಲ. 

ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರೂ. 50 ಲಕ್ಷ ಕೆಲಸ ನಡೆದಿದೆ. ರೈತರು ವೈಯಕ್ತಿಕವಾಗಿ ತಮ್ಮ ಜಮೀನುಗಳಲ್ಲಿ ಬಾಳೆಗಿಡ, ಹಣ್ಣಿನ ಸಸಿಗಳನ್ನು ನೆಟ್ಟಿದ್ದಾರೆ. ಇಂಗು ಗುಂಡಿ, ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಖಾತ್ರಿ ಯೋಜನೆಯಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೆಲಸ ಗ್ರಾಮದಲ್ಲಿ ನಡೆದಿಲ್ಲ.
ಗ್ರಾಮದಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಇದೆ. ಇಡೀ ಗ್ರಾಮಕ್ಕೆ ಎರಡು ಕೊಳವೆ ಬಾವಿಗಳ ಮೂಲಕ ವಾರಕೊಮ್ಮೆ ಮಾತ್ರ ಕುಡಿಯುವ ಪೂರೈಕೆ ನೀಡಲಾಗುತ್ತಿದೆ.  ಇಂದಿಗೂ ಹರಿಜನ ಕಾಲೋನಿಗೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ ಎನ್ನುತ್ತಾರೆ ಗ್ರಾ.ಪಂ. ಮಾಜಿ ಸದಸ್ಯ ಮರಿಲಿಂಗಯ್ಯ.

ಗ್ರಾಮದಲ್ಲಿ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳೇ ಉಳಿದುಕೊಂಡಿದ್ದು, ಬದಲಾವಣೆಗೆ ಜನರು ಮನವಿ ನೀಡಿ ಸುಸ್ತಾಗಿದ್ದಾರೆ. ಮದ್ದೂರಿಗೆ ಈ ಗ್ರಾಮ ಹತ್ತಿರವಿದ್ದರೂ ಇಲ್ಲಿ ದಿನಕ್ಕೆ ಕೇವಲ 6 ಗಂಟೆ ಮಾತ್ರ ವಿದ್ಯುತ್ ಲಭ್ಯ. ಜೊತೆಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎನ್ನುವುದು ಇಲ್ಲಿನ ಜನರ ನೋವು. 

ಬಹುತೇಕ ಜನರು ಬಯಲು ಶೌಚಾಲಯ ಬಳಸುತ್ತಿದ್ದಾರೆ. ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಕೆಲವರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ ಹಣ ಬಿಡುಗಡೆಗೊಂಡಿಲ್ಲ. ಇಂದಿಗೂ ಈ ಗ್ರಾಮದಲ್ಲಿ 400ಕ್ಕೂ ಹೆಚ್ಚು ಜನರು ಗುಡಿಸಲು ವಾಸಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.