ADVERTISEMENT

ಸಾಹಿತಿ ದೇವನೂರ ಮಹಾದೇವ ಬೆಂಬಲ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:50 IST
Last Updated 17 ಏಪ್ರಿಲ್ 2013, 10:50 IST

ಪಾಂಡವಪುರ: ರೈತರ ಹೆಸರು ಹೇಳಿಕೊಂಡು ಕೆಟ್ಟ ರಾಜಕಾರಣ ಮಾಡುತ್ತಿರುವ ಕೆ.ಎಸ್.ಪುಟ್ಟಣ್ಣಯ್ಯ ಅವರ ರಾಜಕೀಯ ಜೀವನ ಅಂತ್ಯಗೊಳಿಸುವುದೇ ನನ್ನ ಮುಖ್ಯ ಗುರಿ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಘೋಷಿಸಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದ ಬಳಿ ಜೆಡಿಎಸ್ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುಟ್ಟಣ್ಣಯ್ಯ ಅವರಂತಹ ನೂರು ಜನ ಎದುರಾಳಿ ಇದ್ದರೂ ನನ್ನ ಗೆಲುವು ತಡೆಯಲು ಸಾಧ್ಯವಿಲ್ಲ. ಪುಟ್ಟಣ್ಣಯ್ಯ ಮಾಡುತ್ತಿರುವ ನೀಚ ರಾಜಕಾರಣವನ್ನು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನೂ ಮಾಡುವುದಿಲ್ಲ ಎಂದು ಆರೋಪಿಸಿದರು.

ಸಾಹಿತಿ ದೇವನೂರ ಮಹಾದೇವ ಅವರ ಬಗ್ಗೆ ಅಪಾರ ಗೌರವವಿತ್ತು. ಆದರೆ, ಭ್ರಷ್ಟಾಚಾರಿ ಪುಟ್ಟಣ್ಣಯ್ಯ ಪರ ಪ್ರಚಾರಕ್ಕೆ ಬಂದಿದ್ದು ಅವರ ಮೇಲಿನ ಗೌರವಕ್ಕೆ ಚ್ಯುತಿ ಬಂದಂತಾಗಿದೆ. ತಾವು ಭ್ರಷ್ಟರಲ್ಲ ಎಂದು ಹೇಳಿಕೊಳ್ಳುವ ಪುಟ್ಟಣ್ಣಯ್ಯ ಅವರಿಗೆ ಚುನಾವಣೆಯಲ್ಲಿ ಖರ್ಚು ಮಾಡುತ್ತಿರುವ ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು. 40 ಸಾವಿರ ಚಿನ್ನದ ಉಂಗುರಗಳನ್ನು ಮಾಡಿಸಿ ಮತದಾರರಿಗೆ ಪುಟ್ಟರಾಜು ಹಂಚುತ್ತಿದ್ದಾರೆ ಎಂದು ಗಾಳಿ ಸುದ್ದಿ ಹಬ್ಬಿಸಿರುವ ರೈತ ಸಂಘದವರು, ಅದನ್ನು ಸಾಬೀತು ಪಡಿಸಿದರೆ ಅವರ ಮನೆಯಲ್ಲಿ ನಾನು ಜೀತ ಮಾಡುವುದಾಗಿ ಸವಾಲು ಹಾಕಿದರು.

ಜೆಡಿಎಸ್‌ಗೆ ಅಧಿಕಾರ: ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಬಿಜೆಪಿಯಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದ 6 ಕೋಟಿ ಜನರು ಎಂದೂ ಕಂಡಿರಲಿಲ್ಲ. ಕೆಜೆಪಿ ಮತ್ತು ಬಿಜೆಪಿ ಆಡುತ್ತಿರುವ ನಾಟಕವನ್ನು ಮತದಾರರು ವೀಕ್ಷಿಸುತ್ತಿದ್ದಾರೆ. ಎರಡೂ ಪಕ್ಷಗಳನ್ನು ಚುನಾವಣೆಯಲ್ಲಿ ಜನರು ತಿರಸ್ಕರಿಸಲಿದ್ದಾರೆ. ಜತೆಗೆ ಕಾಂಗ್ರೆಸ್‌ನವರ ನಾಟಕವು ಕೂಡ ಜನತೆಯ ಅರಿವಿಗೆ ಬಂದಿದೆ ಎಂದರು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ. ಕೆಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಬಿಜೆಪಿಗೆ ನೆಲೆಯಿಲ್ಲ. ಈಗಾಗಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಈ ಭಾರಿಯೂ ದುದ್ದ ಹೋಬಳಿಯ ಮತದಾರರು ಪುಟ್ಟರಾಜು ಅವರನ್ನು ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವನೂರ ಬೆಂಬಲ ಸರಿಯಲ್ಲ: ರಾಜ್ಯ ಕಂಡ ಅತಿ ದೊಡ್ಡ ಭ್ರಷ್ಟಚಾರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲ ಪಡೆದುಕೊಂಡಿರುವ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸುತ್ತಿರುವ ಸಾಹಿತಿ ದೇವನೂರು ಮಹಾದೇವ ಅವರ ನಿಲುವು ಸರಿಯಲ್ಲ ಎಂದ ಕದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್ ಹೇಳಿದರು. 

ಮಾಜಿ ಶಾಸಕರಾದ ಎಚ್.ಬಿ.ರಾಮು, ಕೆ.ಟಿ.ಶ್ರೀಕಂಠೇಗೌಡ, ಜಿ.ಪಂ.ಸದಸ್ಯರಾದ ಡಾ.ಶಂಕರೇಗೌಡ, ಮಾದಪ್ಪ, ಮಂಜುಳಾ ಪರಮೇಶ್, ಮಾಜಿ ಸದಸ್ಯೆ ನಾಗಮ್ಮಪುಟ್ಟರಾಜು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮರಾಜು, ತಾ.ಪಂ.ಸದಸ್ಯರಾದ ಶೈಲಜಾ ಗೋವಿಂದರಾಜು, ಯಶವಂತ್, ನಾಗರಾಜಮೂರ್ತಿ ಇತರರು ವೇದಿಕೆಯಲ್ಲಿದ್ದರು.

ಅದ್ದೂರಿ ಮೆರವಣಿಗೆ: ಸಮಾರಂಭಕ್ಕೂ ಮುನ್ನ ಪಟ್ಟಣದ ಮಹಾಕಾಳೇಶ್ವರಿ ದೇಗುಲದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ತೆರಳಿ ವೇದಿಕೆ ಬಳಿ ಸಾಗಿತು. ಅಪಾರ ಜನಸ್ತೋಮದ ಜತೆಗೆ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ತೆರೆದ ವಾಹನದಲ್ಲಿ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.