ADVERTISEMENT

ಸಿಗದ ಸೂರು: ಮತ್ತೆ ಗುಡಿಸಲಿಗೆ ನಿರಾಶ್ರಿತರು

ಸ್ವಂತ ಸೂರಿನ ಕನಸು ಈಡೇರಲಿಲ್ಲ, ಭಸ್ಮವಾಗಿದ್ದ ಸ್ಥಳದಲ್ಲೇ ತಾತ್ಕಾಲಿತ ಶೆಡ್‌ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:12 IST
Last Updated 20 ಮೇ 2018, 13:12 IST
ಕೀಲಾರ ಗ್ರಾಮದಲ್ಲಿ ಸುಟ್ಟು ಹೋದ ಗುಡಿಸಲು ಜಾಗದಲ್ಲೇ ಮತ್ತೆ ಗುಡಿಸಲು ಕಟ್ಟಿಕೊಂಡಿರುವ ತಮಿಳು ಕಾಲೊನಿ ನಿವಾಸಿಗಳು
ಕೀಲಾರ ಗ್ರಾಮದಲ್ಲಿ ಸುಟ್ಟು ಹೋದ ಗುಡಿಸಲು ಜಾಗದಲ್ಲೇ ಮತ್ತೆ ಗುಡಿಸಲು ಕಟ್ಟಿಕೊಂಡಿರುವ ತಮಿಳು ಕಾಲೊನಿ ನಿವಾಸಿಗಳು   

ಮಂಡ್ಯ: ಗುಡಿಸಲು ಭಸ್ಮವಾಗಿ ಅಂಬೇಡ್ಕರ್‌ ಭವನದಲ್ಲಿ ವಾಸಿಸುತ್ತಿದ್ದ ಕೀಲಾರ ಗ್ರಾಮದ ತಮಿಳು ಕಾಲೊನಿ ನಿವಾಸಿಗಳ ಶಾಶ್ವತ ಸೂರಿನ ಕನಸು ಈಡೇರಲಿಲ್ಲ. ನಾಲ್ಕು ತಿಂಗಳುಗಳಿಂದ ಬೀದಿಯಲ್ಲಿ ಬದುಕುತ್ತಿದ್ದ ಅವರು ಈಗ ಅನಿವಾರ್ಯವಾಗಿ ಮತ್ತೆ ಗುಡಿಸಲು ಜೀವನಕ್ಕೆ ಮರಳಿದ್ದಾರೆ.

ಭರವಸೆಗಳನ್ನು ನಂಬಿ ಕಂಗಾಲಾದ ನಿರಾಶ್ರಿತರು ಬೆಂಕಿ ಬಿದ್ದ ಜಾಗದಲ್ಲೇ ತಾತ್ಕಾಲಿಕ ಶೆಡ್‌ ಕಟ್ಟಿಕೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾದ ಗುಡಿಸಲು ಜಾಗದಲ್ಲಿ ಬೂದಿ ಈಗಲೂ ಹಾಗೆಯೇ ಇದೆ. ಪಾತ್ರೆ, ದವಸ ಧಾನ್ಯ, ಬಟ್ಟೆಗಳು ಸುಟ್ಟುಹೋದ ಕುರುಹೂ ಕಾಣುತ್ತವೆ. ಅದೇ ಜಾಗದಲ್ಲಿ ಸಾಕಿದ್ದ 11 ಮೇಕೆಗಳು ಜೀವಂತವಾಗಿ ಭಸ್ಮವಾಗಿದ್ದವು. ವೃದ್ಧರೊಬ್ಬರು ಸುಟ್ಟಗಾಯಗಳಿಂದ ಆಸ್ಪತ್ರೆ ಸೇರಿದ್ದರು. ಇವೆಲ್ಲ ಕಹಿ ನೆನಪುಗಳೊಂದಿಗೆ ನಿವಾಸಿಗಳು ಅಂಬೇಡ್ಕರ್‌ ಭವನದಲ್ಲಿ ತಾತ್ಕಾಲಿಕವಾಗಿ ಜೀವನ ನಡೆಸುತ್ತಿದ್ದರು. ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಸೇವಿಸುತ್ತಿದ್ದರು. ರಾಜಕೀಯ ಪಕ್ಷಗಳ ಮುಖಂಡರು, ಅಧಿಕಾರಿಗಳು ಅವರಿಗೆ ಚಾಪೆ, ಪಾತ್ರೆ, ತಟ್ಟೆ, ಲೋಟ ಕೊಡಿಸಿ ಕೈತೊಳೆದುಕೊಂಡಿದ್ದರು. ಆದರೆ ನಿರಾಶ್ರಿತರ ಶಾಶ್ವತ ಸೂರಿನ ಬೇಡಿಕೆ ಮಾತ್ರ ಈಡೇರಲಿಲ್ಲ.

ಜ. 10ರಂದು ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿ 13 ಗುಡಿಸಲುಗಳು ಸುಟ್ಟು ಭಸ್ಮವಾದವು. ಅಯ್ಯಕುಟ್ಟಿ, ಸಡೆಯಾ, ಆನಂದ್, ರಾಮಲಿಂಗು, ಧರ್ಮಲಿಂಗು, ಅಣ್ಣಾಮಲೈ, ರಾಮಾಯಿ, ದೊರೆ, ವೇಲು, ಮುರುಗ ಮುಂತಾದವರ ಕುಟುಂಬಗಳು ಅಗ್ನಿ ದುರಂತದಲ್ಲಿ ಬೀದಿಗೆ ಬಿದ್ದವು. ವಸತಿ ಯೋಜನೆ ಅಡಿಯಲ್ಲಿ ಶಾಶ್ವತ ಸೂರು ನಿರ್ಮಿಸಿಕೊಡುವಂತೆ ನಿವಾಸಿಗಳು ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದರು. ಚುನಾವಣೆಯ ಸಮಯದಲ್ಲಿ ಕನಸು ಈಡೇರಬಹುದು ಎಂದು ನಿವಾಸಿಗಳು ನಿರೀಕ್ಷಿಸಿದ್ದರು. ಆದರೆ ಕನಸು ಈಡೇರಲಿಲ್ಲ. ಹೀಗಾಗಿ ಅದೇ ಹಳೇ ಗುಡಿಸಲು ಜೀವನದತ್ತ ಮರಳಿದ್ದು, ತೆಂಗಿನ ಗರಿ ತಂದು ಗುಡಿಸಲು ಕಟ್ಟಿಕೊಂಡಿದ್ದಾರೆ.

ADVERTISEMENT

‘ಎಷ್ಟು ದಿನ ಬೀದಿಯಲ್ಲಿ ಬದುಕುವುದು? ನಮ್ಮ ಕಷ್ಟ ಯಾರಿಗೂ ಬರಬಾರದು. ನಮ್ಮ ಪೂರ್ವಜರು ತಮಿಳುನಾಡಿನಿಂದ ಇಲ್ಲಿಗೆ ಬಂದು ನೆಲೆಸಿದ್ದರು. ನಾವು ಇಲ್ಲಿ ಹುಟ್ಟಿ ಇಲ್ಲೇ ಬೆಳೆದು ಕರ್ನಾಟಕದ ಜನರೇ ಆಗಿದ್ದೇವೆ. ಕೂಲಿ ಮಾಡಿ ಬದುಕುತ್ತಿದ್ದೇವೆ. ನಮ್ಮ ಬಳಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಎಲ್ಲವೂ ಇವೆ. ಆದರೆ ಬದುಕಲು ಒಂದು ಸೂರಿಲ್ಲ’ ಎಂದು ಕಾಲೊನಿಯ ನಿವಾಸಿ ಮುನಿಯ ನೋವು ತೋಡಿಕೊಂಡರು.

ನರಕ ಸದೃಶ ಜೀವನ: ಈ ನಿವಾಸಿಗಳು ಸುಟ್ಟ ಗೋಡೆಗಳಿಗೆ ತೆಂಗಿನ ಗರಿ ಕಟ್ಟಿ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಆದರೆ ಅವುಗಳಿಗೆ ಯಾವ ರಕ್ಷಣೆಯೂ ಇಲ್ಲ. ಮಳೆ ಬಂದರೆ ಮತ್ತೆ ಅಂಬೇಡ್ಕರ್‌ ಭವನದತ್ತ ಓಡಿ ಹೋಗಿ ರಕ್ಷಣೆ ಪಡೆದುಕೊಳ್ಳಬೇಕು. ಬಿರುಗಾಳಿ ಸಹಿತ ಮುಂಗಾರು ಮಳೆ ಆರಂಭವಾದರೆ ಈ ಜನರನ್ನು ದೇವರೇ ಕಾಪಾಡಬೇಕು. ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಕೀಟಗಳ ಬಾಧೆಯೂ ಇದೆ. ಹಾವು, ಹಲ್ಲಿ ಬರುವ ಅಪಾಯವೂ ಇದೆ. ಇಂತಹ ನರಕಸದೃಶ ಸನ್ನಿವೇಶದಲ್ಲಿ ಈ ನಿವಾಸಿಗಳು ಬದುಕುತ್ತಿದ್ದಾರೆ.

‘ಎಲ್ಲರಿಗೂ ಸೂರು ಒದಗಿಸುವುದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೇಳುತ್ತಿವೆ. ಆದರೆ ನಿಜವಾದ ನಿರ್ಗತಿಕರಿಗೆ ವಸತಿ ಭಾಗ್ಯ ಕಳೆದ 60 ವರ್ಷಗಳಿಂದಲೂ ಸಿಕ್ಕಿಲ್ಲ. ಗುಡಿಸಲಿನಲ್ಲಿ ವಾಸ ಮಾಡುತ್ತಿರುವುದು ನಮ್ಮ ಪಾಲಿನ ದುರಂತ. ಗುಡಿಸಲು ಸುಟ್ಟಾಗ ಜಿಲ್ಲೆಯಾದ್ಯಂತ ದೊಡ್ಡ ಸುದ್ದಿಯಾಗಿ ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಸೂರು ಒದಗಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಭರವಸೆ ಈಡೇರಿಲ್ಲ. 12 ಕುಟುಂಬಗಳಿಗೆ ವಸತಿಗಾಗಿ ಬಂದ ಹಣವನ್ನು ನಿವೇಶನ ಇಲ್ಲ ಎಂಬ ಕಾರಣಕ್ಕೆ ವಾಪಸ್ ಕಳುಹಿಸಲಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದರೆ ಶಾಸಕರನ್ನು ಕೇಳಿ ಎನ್ನುತ್ತಾರೆ’ ಎಂದು ನಿವಾಸಿ ಧರ್ಮಲಿಂಗಂ ಹೇಳಿದರು.

‘ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನ ನೀಡಲು ಜಾಗ ಸಿಗುತ್ತಿಲ್ಲ. ಸರ್ಕಾರ ನಿಗದಿ ಮಾಡಿದ ₹ 15 ಲಕ್ಷಕ್ಕೆ ಒಂದು ಎಕರೆ ಭೂಮಿಯನ್ನು ಯಾರೂ ಕೊಡಲು ಸಿದ್ಧರಿಲ್ಲ. ಈ ಹಣಕ್ಕೆ ಗ್ರಾಮದಿಂದ ಒಂದು ಕಿ.ಮೀ ದೂರದಲ್ಲಿ ಭೂಮಿ ಸಿಗುತ್ತದೆ. ಆದರೆ ಅಲ್ಲಿ ವಸತಿ ಕಲ್ಪಿಸಿದರೆ ನಿರಾಶ್ರಿತರು ಹೋಗಿ ವಾಸ ಮಾಡಲು ಸಿದ್ಧರಿಲ್ಲ. ಊರಿನಲ್ಲಿಯೇ ವಾಸ ಮಾಡಬೇಕು ಎಂದು ಹೇಳುತ್ತಿದ್ದಾರೆ. ಗುಡಿಸಲು ಸುಟ್ಟಾಗ ಹಲವು ದಾನಿಗಳು ಬಟ್ಟೆ, ಹಾಸಿಗೆ, ಸ್ಟೌ ಹಾಗೂ ಪಾತ್ರೆಗಳನ್ನು ದಾನವಾಗಿ ನೀಡಿದ್ದಾರೆ. ಊರಿನ ಅಂಬೇಡ್ಕರ್ ಭವನದಲ್ಲಿ ಉಳಿದುಕೊಳ್ಳಲು ಅನು ಕೂಲ ಮಾಡಿಕೊಡಲಾಗಿದೆ.
ಊರಿನಲ್ಲಿ ಈಗ ವಾಸವಿರುವ ಜಾಗದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಪಂಚಾಯಿತಿ ವತಿಯಿಂದ ಸಹಾಯ ಮಾಡುತ್ತೇವೆ. ವಾಸವಿರುವ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಗ್ರಾಮಸ್ಥರು ಯಾವುದೇ ತಕರಾರು ಮಾಡುವುದಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್‌ ಹೇಳಿದರು.

ಗುಡಿಸಲು ಪಕ್ಕ ತಿಪ್ಪೆ, ದುರ್ವಾಸನೆ

‘ಗ್ರಾಮದ ಕೆಲವರು ನಾವು ವಾಸವಿರುವ ಗುಡಿಸಲು ಪಕ್ಕದಲ್ಲೇ ಕಸ ಹಾಗೂ ಸಗಣಿ ಹಾಕಲು ತಿಪ್ಪೆ ಮಾಡಿಕೊಂಡಿದ್ದಾರೆ. ತಿಪ್ಪೆ ಪಕ್ಕದಲ್ಲೇ ಅನ್ನ ಬೇಯಿಸಿಕೊಂಡು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ದುರ್ವಾಸನೆಯ ನಡುವೆ ಜೀವನ ಮಾಡಬೇಕಾಗಿದೆ. ಮಳೆ ಬಂದರೆ ತಿಪ್ಪೆಯಲ್ಲಿ ನೀರು ತುಂಬಿಕೊಂಡು ಹಾವು, ಚೇಳು, ಹುಳುಗಳು ಗುಡಿಸಲಿನೊಳಗೆ ಬರುತ್ತವೆ. ಆದಷ್ಟು ಬೇಗ ನಮಗೆ ವಸತಿ ಸೌಲಭ್ಯ ನೀಡಿದರೆ ನಮ್ಮ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಬಹುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೇ ಜಾಗ ನೀಡಿದರೂ ನಾವು ಅಲ್ಲಿ ವಾಸ ಮಾಡಲು ಸಿದ್ಧರಿದ್ದೇವೆ’ ಎಂದು ನಿವಾಸಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.