ADVERTISEMENT

ಸಿಡಿಎಸ್ ನಾಲೆ ಮಣ್ಣಿಗೆ ಕನ್ನ!

ಪ್ರಜಾವಾಣಿ ವಿಶೇಷ
Published 4 ಜೂನ್ 2013, 6:56 IST
Last Updated 4 ಜೂನ್ 2013, 6:56 IST

ಶ್ರೀರಂಗಪಟ್ಟಣ: ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದ ಚಿಕ್ಕದೇವರಾಯ ಸಾಗರ (ಸಿಡಿಎಸ್) ನಾಲೆಯಲ್ಲಿ ಮೂರೂವರೆ ತಿಂಗಳ ಹಿಂದೆಯೇ ನೀರು ನಿಲ್ಲಿಸಿದ್ದು, ನಾಲೆ ಬರಿದಾಗಿರುವುದರಿಂದ ಗೋಡು, ಮರಳು ಹಾಗೂ ಕೆಮ್ಮಣ್ಣಿಗಾಗಿ ನಾಲೆಯ ಒಡಲಿಗೆ ಕನ್ನ ಹಾಕುವ ಕೆಲಸ ಅಡೆತಡೆಯಿಲ್ಲದೆ ನಡೆಯುತ್ತಿದೆ.

ತಾಲ್ಲೂಕಿನ ನೆಲಮನೆ ಗ್ರಾಮದ ಬಳಿ, 73ನೇ ತೂಬಿನ ಸಮೀಪ ನಾಲೆಯನ್ನು ಮನಸ್ಸ ಇಚ್ಛೆ ಅಗೆಯಲಾಗಿದೆ. ಜೆಸಿಬಿ ಯಂತ್ರಗಳನ್ನು ಬಳಸಿ ಅಲ್ಲಲ್ಲಿ ಮಣ್ಣು ಎತ್ತುವಳಿ ಮಾಡಲಾಗಿದೆ. ಇದರಿಂದ ನಾಲೆಯಲ್ಲಿ 8ರಿಂದ 10 ಅಡಿ ಆಳದಷ್ಟು ಗುಂಡಿಗಳು ನಿರ್ಮಾಣವಾಗಿವೆ. ತಗ್ಗಿನ ಜಮೀನುಗಳನ್ನು ಮಟ್ಟ ಮಾಡಲು ಹಾಗೂ ಇಟ್ಟಿಗೆಗಾಗಿ ನಾಲೆಯ ಮಣ್ಣು ಸಾಗಿಸಲಾಗಿದೆ.

ಗುಂಡಿಗಳು ನಿರ್ಮಾಣವಾಗಿರುವುದರಿಂದ ನಾಲೆ ಈಗ ಕುಂಟೆಯಂತೆ ಕಾಣುತ್ತಿದೆ. ಮತ್ತೆ ನಾಲೆಯಲ್ಲಿ ನೀರು ಹರಿಸಿದರೆ ಈ ಗುಂಡಿಗಳಲ್ಲಿ 15 ಅಡಿ ವರೆಗೆ ನೀರು ತುಂಬಿಕೊಳ್ಳುವುದರಿಂದ ರೈತರು, ಜಾನುವಾರು ತೊಳೆಯುವವರು, ಬಟ್ಟೆ ಒಗೆಯುವವರು ಈ ಗುಂಡಿಗಳಲ್ಲಿ ಮುಳುಗುವ ಅಪಾಯವಿದೆ.

ಏರಿ ಶಿಥಿಲ: ನಾಲೆಯಲ್ಲಿ ಎತ್ತಿದ ಮಣ್ಣನ್ನು ಟ್ರ್ಯಾಕ್ಟರ್, ಎತ್ತಿನ ಗಾಡಿಗಳಲ್ಲಿ ಸಾಗಿಸಲು ಅನುಕೂಲ ಆಗುವಂತೆ ನಾಲೆಯ ಏರಿಯನ್ನೇ ಅಗೆಯಲಾಗಿದೆ. ನಾಲೆ ಮಧ್ಯದಿಂದ 45 ಡಿಗ್ರಿ ಕೋನದಲ್ಲಿ ಮೇಲ್ಭಾಗದವರೆಗೆ ರಸ್ತೆ ಮಾಡಿಕೊಳ್ಳಲಾಗಿದೆ. ಸುಮಾರು 20 ಮೀಟರ್ ದೂರ ಏರಿಯನ್ನು ಅಗೆಯಲಾಗಿದೆ. ಏರಿಗೆ ಕಟ್ಟಿದ್ದ ಕಲ್ಲುಗಳನ್ನು ಕಿತ್ತು ಹಾಕಲಾಗಿದೆ. ಇದರಿಂದಾಗಿ ನಾಲೆಯಲ್ಲಿ ಮತ್ತೆ ನೀರು ಹರಿಸಿದರೆ ಏರಿಯೇ ಒಡೆಯುವ ಸಂಭವ ಇದೆ. ಆಗ ನಾಲೆ ಒಡೆದು ನೀರು ವ್ಯಯವಾಗುತ್ತದೆ ಹಾಗೂ ಬೆಳೆದ ಬೆಳೆಗಳು ಸಹ ನೀರಿನಲ್ಲಿ ಕೊಚ್ಚಿ ಹೋಗುಬಹುದು.

`ನಾಲೆಯಲ್ಲಿ ಮೂರು ತಿಂಗಳ ಹಿಂದೆಯೇ ನೀರು ನಿಲ್ಲಿಸಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಕಾವೇರಿ ನಿಗಮ ಯಾವ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ. ನಾಲೆಯಲ್ಲಿ ಗುಂಡಿಗಳು ಬೀಳುತ್ತಿವೆ. ಕಾಲುವೆಯ ಮಧ್ಯ ಭಾಗದಲ್ಲಿಯೇ ಗಿಡಗಂಟಿಗಳು ಬೆಳೆದಿವೆ. ಇದರಿಂದ ಮುಂದಿನ ಭಾಗಕ್ಕೆ ನೀರು ಸರಾಗವಾಗಿ ಹರಿಯುವುದು ಕಷ್ಟವಾಗುತ್ತದೆ. ನೀರು ನಿಲ್ಲುವುದರಿಂದ ನಾಲೆಯ ಏರಿಗೂ ಅಪಾಯ ಬರಲಿದೆ' ಎಂದು ಪಿಕಾರ್ಡ್ ಬ್ಯಾಂಕ್ ಮಾಜಿ ನಿರ್ದೇಶಕ ಎಸ್.ಕೆ. ಮಂಜುನಾಥ್ ಇತರರು ಕಳವಳ ವ್ಯಕ್ತಪಡಿಸಿದ್ದಾರೆ.

`ಚಿಕ್ಕದೇವರಾಯ ನಾಲೆಯನ್ನು ಅಗೆದು ಗುಂಡಿ ಮಾಡಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಮಣ್ಣು ಎತ್ತುವಳಿ ಮಾಡಿರುವವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು' ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.
-ಗಣಂಗೂರು ನಂಜೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT