ಮಂಡ್ಯ: ನಗರದ ಅಭಿವೃದ್ಧಿ, ಹೊಸ ಬಡಾವಣೆಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುವ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದವು (ಮುಡಾ) ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಶೇ 50ಕ್ಕೂ ಹೆಚ್ಚು ಮಂಜೂರಾದ ಸಿಬ್ಬಂದಿ ಇಲ್ಲ.
ಮುಡಾಕ್ಕೆ ಒಟ್ಟು 25 ಮಂದಿ ವಿವಿಧ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 12 ಹುದ್ದೆಗಳು ಭರ್ತಿಯಾಗಿದ್ದರೆ, 13 ಹುದ್ದೆಗಳು ಖಾಲಿ ಇವೆ.
ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಕೆಲಸದ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ.
ಆಯುಕ್ತ, ನಗರ ಯೋಜನಾ ಸದಸ್ಯ, ಸಹಾಯಕ ಎಂಜಿನಿಯರ್‌್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ (ಮೂವರು), ವಾಹನ ಚಾಲಕ (ಒಬ್ಬರು), ಅಟೆಂಡರ್‌್ (ಒಬ್ಬರು) ಹಾಗೂ ಜವಾನ/ ರಾತ್ರಿ ಕಾವಲುಗಾರರಾಗಿ ನಾಲ್ವರು ಇದ್ದಾರೆ.
ಸಹಾಯಕ ಕಾರ್ಯಪಾಲಕ ಎಂಜಿನಿಯರ್‌್, ನಗರ ಯೋಜಕ, ಕಾರ್ಯದರ್ಶಿ, ಸಹಾಯಕ ನಗರ ಯೋಜಕರು, ಡ್ರಾಫ್ಟ್ ಮನ್‌್, ಪ್ರಥಮ ದರ್ಜೆ ಭೂ ಮಾಪಕರು, ರಾಜಸ್ವ ನಿರೀಕ್ಷಕರು, ಶೀಘ್ರಲಿಪಿಗಾರ, ವರ್ಕ್ ಇನ್‌ಸ್ಪೆಕ್ಟರ್‌್, ಬೆರಳಚ್ಚುಗಾರ, ವಾಹನ ಚಾಲಕ ಹುದ್ದೆಗಳು ಖಾಲಿ ಇವೆ.
1989 ರಲ್ಲಿ ಸಾಹುಕಾರ ಚನ್ನಯ್ಯ ಬಡಾವಣೆ, 1990ರಲ್ಲಿ ಸಾತನೂರು ಬಡಾವಣೆ ಹಾಗೂ 1997ರಲ್ಲಿ ವಿವೇಕಾನಂದನಗರ ಬಡಾವಣೆಗಳನ್ನು ಮುಡಾ ವತಿಯಿಂದ ರಚಿಸಲಾಗಿದೆ. ಸಾಹುಕಾರ ಚನ್ನಯ್ಯ ಬಡಾವಣೆ ಪೂರ್ಣ ಪ್ರಮಾಣದಲ್ಲಿ ಮನೆಗಳಾಗಿವೆ.
ಸಾತನೂರು ಬಡಾವಣೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮನೆಗಳಾಗಿವೆ. ವಿವೇಕಾನಂದ ನಗರದಲ್ಲಿಯೂ ಸಾಕಷ್ಟು ನಿವೇಶನಗಳು ಖಾಲಿ ಉಳಿದಿವೆ. ಮೂಲೆ ಹಾಗೂ ಮಧ್ಯಂತರ ನಿವೇಶನಗಳನ್ನೂ ಮುಡಾ ಮಾರಾಟ ಮಾಡಬೇಕಾಗಿದೆ.
ನಿರ್ವಹಣೆಯ ಕೊರತೆಯಿಂದಾಗಿ ಸಾತನೂರು ಹಾಗೂ ವಿವೇಕಾನಂದನಗರ ಬಡಾವಣೆಗಳಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಜಂಗಲ್ ಕಟಿಂಗ್‌ಗಾಗಿ ಟೆಂಡರ್ ಆಹ್ವಾನಿಸಲಾಗಿತ್ತು. ಈಗಷ್ಟೇ ಕಾಮಗಾರಿ ಆರಂಭವಾಗಿದೆ. ಈ ಹಿಂದೆಯೂ ಒಮ್ಮೆ ಜಂಗಲ್ ಕಟಿಂಗ್ ಮಾಡಿಸಲಾಗಿದೆ.
ಕಳೆದ 17 ವರ್ಷಗಳಿಂದ ಹೊಸ ಬಡಾವಣೆ ಅಸ್ತಿತ್ವಕ್ಕೆ ಬಂದಿಲ್ಲ. ನಿವೇಶನಗಳಿಗಾಗಿ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಸಾರ್ವಜನಿಕರ ನಿವೇಶನ ಬೇಡಿಕೆ ಈಡೇರುವುದು ಯಾವಾಗ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಲೆಕ್ಕಪತ್ರ ನಿರ್ವಹಣ ಮಾಡುತ್ತಿದ್ದ ನೌಕರ ಇತ್ತೀಚೆಗೆ ಮುಡಾದಲ್ಲಿ ನಡೆದ ಹಣಕಾಸಿನ ಅವ್ಯವಹಾರದಲ್ಲಿ ಅಮಾನತುಗೊಂಡು ಮನೆ ಸೇರಿದ್ದಾರೆ. ಮುಡಾದ ಬಜೆಟ್‌್ ತಯಾರಿಸಬೇಕಿದ್ದು, ಸೂಕ್ತ ಸಿಬ್ಬಂದಿ ಕೊರತೆಯಿಂದ ಬಜೆಟ್ ತಯಾರಿಕೆ ಸವಾಲಾಗಿ ಕುಳಿತಿದೆ.
ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎನ್ನುತ್ತಾರೆ ಮುಡಾ ಆಯುಕ್ತ ಕೆ. ಮಥಾಯ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.