ADVERTISEMENT

ಸಿಬ್ಬಂದಿ ಕೊರತೆ: ಸರ್ಕಾರಿ ಆಸ್ಪತ್ರೆ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:38 IST
Last Updated 27 ಡಿಸೆಂಬರ್ 2012, 7:38 IST

ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಿಸಲು ಹಾಗೂ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಆಸ್ಪತ್ರೆಯ ಮುಖ್ಯದ್ವಾರದ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಕ್ಷೇತ್ರದ ಶಾಸಕ ಹಾಗೂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ್‌ಗುಪ್ತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಇಲ್ಲದ ಕಾರಣ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಅರಿವಳಿಕೆ ಹಾಗೂ ಮೂಳೆ ತಜ್ಞರು ಕೂಡ ಇಲ್ಲ. ದಾದಿಯರ ಕೊರತೆಯಿದ್ದು ರೋಗಿಗಳು ಪರದಾಡುವ ಸ್ಥಿತಿ ಇದೆ. ಆದರೂ, ಅಗತ್ಯ ಸಿಬ್ಬಂದಿ ನೇಮಿಸುವಂತೆ ಮೇಲಾಧಿಕಾರಿಗಳಿಗೆ ಏಕೆ ಕೋರಿಕೆ ಸಲ್ಲಿಸಿಲ್ಲ? ಎಂದು ಡಿ.ಬಿ.ರುಕ್ಮಾಂಗದ, ಚಂದಗಾಲು ಶಂಕರ್ ಇತರರು ಅಶೋಕ್‌ಗುಪ್ತ ಅವರನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯಲ್ಲಿ ಕೇವಲ ಒಂದು ಅಂಬ್ಯುಲೆನ್ಸ್ ಕಾರ್ಯ ನಿರ್ವಹಿಸುತ್ತಿದ್ದು ಅಪಘಾತ ಇತರೆ ಅವಘಡ ಸಂಭವಿಸಿದರೆ ತುರ್ತು ಸೇವೆ ಕಷ್ಟವಾಗಿದೆ.

ಎಕ್ಸ್‌ರೇ ಯಂತ್ರ ಇದ್ದರೂ ಅದನ್ನು ಮೂಲೆಗೆ ಸೇರಿಸಿದ್ದಾರೆ. ಇದರಿಂದ ರೋಗಿಗಳು ಹೆಚ್ಚು ಹಣ ಕೊಟ್ಟು ಎಕ್ಸ್‌ರೇ ಮಾಡಿಸುತ್ತಿದ್ದಾರೆ. ಆಸ್ಪತ್ರೆಯ ಫಲಕದಲ್ಲಿ ಲಭ್ಯ ವೈದ್ಯರ ಸೇವಾ ವೇಳಾಪಟ್ಟಿ ಪ್ರಕಟಿಸದ ಕಾರಣ ರೋಗಿಗಳಲ್ಲಿ ಗೊಂದಲ ಉಂಟಾಗುತ್ತಿದೆ. ಗ್ಲುಕೋಸ್ ಹಾಕುವ ಪರಿಕರಗಳು ಕೂಡ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅಂಗವಿಕಲರ ಸಂಘದ ತಾಲ್ಲೂಕು ಉಪಾಧ್ಯಕ್ಷ ಪಾಲಹಳ್ಳಿ ಬಸವರಾಜು, ವೈ.ಪಿ.ಮಂಜುನಾಥ್, ಭರತ್, ಭೈರಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೆಆರ್‌ಎಸ್‌ನಲ್ಲಿ ಆದಿಶಕ್ತಿ ಉತ್ಸವ
ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಆದಿಶಕ್ತಿ (ಕುಂಬಾರಮ್ಮ) ಉತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಸಮೀಪದ ಕಾವೇರಿ ನದಿಯಿಂದ ಉತ್ಸವವನ್ನು ಗ್ರಾಮಕ್ಕೆ ಬಿಜಯಂಗೈಸಲಾಯಿತು. ಕೆಆರ್‌ಎಸ್‌ನ ಸಂತೆಮಾಳ, ಅರಳಿಕಟ್ಟೆ ವೃತ್ತ, ತಲಕಾಡು ಫೈಲ್, ಪಿಂಚಲಾಬೋವಿ ಫೈಲ್, ಮದ್ದೂರು ಫೈಲ್, ರೈಲ್ವೆ ಸ್ಟೇಷನ್ ರಸ್ತೆಗಳಲ್ಲಿ ಉತ್ಸವ ನಡೆಯಿತು. ಉತ್ಸವ ಸಾಗಿದ ಮಾರ್ಗದಲ್ಲಿ ಪ್ರತಿ ಮನೆಯ ಮುಂದೆ ಭಕ್ತರು ಪೂಜೆ ಸಲ್ಲಿಸಿದರು. ಕಣಗಿಲೆ ಹೂ, ಬೇವಿನ ಸೊಪ್ಪಿನಿಂದ ಅಲಂಕರಿಸಿದ್ದ ತಂಬಿಟ್ಟಿನ ಆರತಿ ಉತ್ಸವಕ್ಕೆ ಮೆರಗು ನೀಡಿತ್ತು.

ದೇವಾಲಯಕ್ಕೆ ಅಲಂಕೃತ ಉತ್ಸವ ಆಗಮಿಸಿದ ವೇಳೆ ಭಕ್ತರು ಪಟಾಕಿ ಸಿಡಿಸಿದರು. ಅರ್ಚಕ ಅನಿಲ್ ನೇತೃತ್ವದಲ್ಲಿ ಧೂಪ, ದೀಪ ವಿಶೇಷ ಪೂಜೆಗಳು ನಡೆದವು. ಕೆಆರ್‌ಎಸ್, ಉಂಡವಾಡಿ, ಹುಲಿಕೆರೆ ಗ್ರಾಮಗಳ ಭಕ್ತರು ಆಗಮಿಸಿದ್ದರು. ಪ್ರಸಾದ ವಿನಿಯೋಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.