ADVERTISEMENT

ಸೆಸ್ಕ್ ಅಧಿಕಾರಿಗಳಿಗೆ ದಿಗ್ಬಂಧನ; ಗ್ರಾಮಸ್ಥರ ಆಕ್ರೋಶ

ವಿದ್ಯುತ್ ಅಸಮರ್ಪಕ ಪೂರೈಕೆ-ದೂರು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 6:36 IST
Last Updated 14 ಡಿಸೆಂಬರ್ 2012, 6:36 IST

ಮಂಡ್ಯ: ವಿದ್ಯುತ್ ಸಮರ್ಪಕ ಪೂರೈಕೆಗೆ ಒತ್ತಾಯಿಸಿ, ದುದ್ದ ಹೋಬಳಿಯ ಕೆಲವು ಹಳ್ಳಿಗಳ ಗ್ರಾಮಸ್ಥರು ಸೆಸ್ಕ್ ಅಧಿಕಾರಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿ ಪ್ರತಿಭಟಿಸಿದ ಘಟನೆ ಗುರುವಾರ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಳ್ಳಿ ಸೆಸ್ಕ್ ಶಾಖಾ ಕಚೇರಿಗೆ ಬೆಳಿಗ್ಗೆ 11 ಗಂಟೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಮಧ್ಯಾಹ್ನ 1ಗಂಟೆವರೆಗೂ ಅಧಿಕಾರಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಪಂಪ್‌ಸೆಟ್ ಆಶ್ರಿತ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಕುಡಿಯುವ ನೀರಿಗೂ ತೊಂದರೆ ಆಗಿದೆ.

ಕಳೆದ ಎರಡು ತಿಂಗಳಿನಿಂದ ಈ ಸಮಸ್ಯೆಯಿದ್ದರೂ ಅಧಿಕಾರಿಗಳು ಬಗೆಹರಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿರುವ ಬಗೆಗೆ ಮಾಹಿತಿ ಪಡೆದ ಸೆಸ್ಕ್ ಸೂಪರಿಂಟೆಂಡೆಂಟ್ ಹಾಗೂ ಎಇಇ ದುರ್ಗಪ್ಪ ಸ್ಥಳಕ್ಕೆ ಭೇಟಿ ಸಮಸ್ಯೆ ಆಲಿಸಿದರು. ಈ ಸಮಯದಲ್ಲಿ ರೈತರು, ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿಗಳು, ನಿಗದಿತ ಸಮಯದಲ್ಲಿ ತ್ರಿ ಫೇಸ್ ವಿದ್ಯುತ್ ನೀಡುವ ಜೊತೆಗೆ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸು ಪಡೆಯಲಾಯಿತು. ಶಿವಳ್ಳಿ, ದುದ್ದ, ಮಾರನಹಳ್ಳಿ, ಎಂ. ಕೆಬ್ಬಹಳ್ಳಿ, ಪುರದಕೊಪ್ಪಲು, ಬೆಟ್ಟಹಳ್ಳಿ, ಬೀಚನಹಳ್ಳಿ, ಜವರೇಗೌಡನ ಕೊಪ್ಪಲು, ಮಾಡಲ, ಸೌದೇನಹಳ್ಳಿ, ಹೊಸಹಳ್ಳಿ, ಮುದಗಂದೂರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೋರೇಗೌಡ, ಚಂದ್ರು, ಈರಣ್ಣ, ಮಹದೇವಪ್ಪ, ಬಿ.ಶಂಕರಗೌಡ, ಸಿದ್ದಪ್ಪ, ನರಸಿಂಹೇಗೌಡ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.