ADVERTISEMENT

ಸ್ವಯಂ ಸೇವಾ ಸಂಸ್ಥೆಯ ಮೋಸ ಬಯಲಿಗೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 5:55 IST
Last Updated 15 ಜೂನ್ 2012, 5:55 IST
ಸ್ವಯಂ ಸೇವಾ ಸಂಸ್ಥೆಯ ಮೋಸ ಬಯಲಿಗೆ
ಸ್ವಯಂ ಸೇವಾ ಸಂಸ್ಥೆಯ ಮೋಸ ಬಯಲಿಗೆ   

ಶ್ರೀರಂಗಪಟ್ಟಣ: ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಬಾಲಕಾರ್ಮಿಕ ವಸತಿ ಶಾಲೆಗೆ ಸೇರಿಸಿಕೊಂಡಂತೆ ದಾಖಲೆ ಸೃಷ್ಟಿಸಿ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.

 ಗಂಜಾಂ ಸರ್ಕಾರಿ ಮೀನುಗಾರಿಕಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ನೀಡಿದ ಮಾಹಿತಿ ಆಧರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ದಿಢೀರ್ ಭೇಟಿ ನೀಡಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಪಟ್ಟಣದ ಕಸಾಬರ ಮಾರಿಗುಡಿ ಬೀದಿಯಲ್ಲಿರುವ ಮೈತ್ರಿ ಗ್ರಾಮೀಣಾಭಿವ್ರದ್ಧಿ ಸಂಸ್ಥೆ ಬಾಲ ಕಾರ್ಮಿಕರ ವಸತಿ ಶಾಲೆ ನಡೆಸುವ ನೆಪದಲ್ಲಿ ಸರ್ಕಾರರಿ ಶಾಲೆಯ ಮಕ್ಕಳ ಹೆಸರನ್ನು ಹಾಜರಾತಿ ಪುಸ್ತಕದಲ್ಲಿ ದಾಖಲಿಸಿಕೊಂಡಿದೆ.
ಟೌನ್ ವ್ಯಾಪ್ತಿಯ ಗಂಜಾಂನ ಸರ್ಕಾರಿ ಮೀನುಗಾರಿಕಾ ಶಾಲೆಯ ವಿದ್ಯಾರ್ಥಿಗಳಾದ 6ನೇ ತರಗತಿಯ ಮಮತಾ, 7ನೇ ತರಗತಿಯ ಕಿರಣ್, ಸುರೇಶ್, ಮಂಜುನಾಥ, ಶ್ರೀನಿವಾಸ, ಅಯ್ಯಪ್ಪ ಸೇರಿದಂತೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಾಲ ಕಾರ್ಮಿಕ ವಸತಿ ಶಾಲೆಗೆ ಸೇರಿಸಿಕೊಂಡಂತೆ ದಾಖಲೆ ಸೃಷ್ಟಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ತಿಳಿಸಿದ್ದಾರೆ.

ಸರ್ಕಾರದಿಂದ ಅನುದಾನ ಪಡೆಯುವ ಏಕೈಕ ಉದ್ದೇಶದಿಂದ ಈ ರೀತಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳನ್ನೂ ವಂಚಿಸಿ ಈ ಕೆಲಸ ಮಾಡಿದ್ದಾರೆ. ಗ್ಯಾರೇಜ್, ಹೋಟೆಲ್ ಇತರೆಡೆ ಕೆಲಸ ಮಾಡುವ ಮಕ್ಕಳನ್ನು ಬಾಲಕಾರ್ಮಿಕ ವಸತಿ ಶಾಲೆಗೆ ಸೇರಿಸಿಕೊಂಡು ಶಿಕ್ಷಣ ಕೊಡಬೇಕು. ಆದರೆ ಮೈತ್ರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಈ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ದಾಖಲಾಗಿರುವ ಮಕ್ಕಳನ್ನು ನಮ್ಮ ಬಾಲ ಕಾರ್ಮಿಕ ವಸತಿ ಶಾಲೆಗೆ ಸೇರಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಶಾಲೆಯ ಮೇಲ್ವಿಚಾರಕರಿಂದ ಮಾಹಿತಿ ಪಡೆಯುತ್ತೇನೆ. ಸರ್ಕಾರಿ ಶಾಲೆ ಮಕ್ಕಳು ಇದ್ದರೆ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಶ್ರೀಕಾಂತ್ ದೂರವಾಣಿಯಲ್ಲಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಕೊಡಿಯಾಲ ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ ಇಲ್ಲ
ತಾಲ್ಲೂಕಿನ ಕೊಡಿಯಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆ ಆರಂಭವಾದ ದಿನದಿಂದಲೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಲಾಗಿದೆ.

ಅಕ್ಕಿ, ಬೇಳೆ, ಎಣ್ಣೆ ಇಲ್ಲದ ಕಾರಣಕ್ಕೆ ಬಿಸಿಯೂಟ ನಿಲ್ಲಿಸಲಾಗಿದೆ. ಈ ಶಾಲೆಗೆ ಕೊಡಿಯಾಲ ಅಷ್ಟೇ ಅಲ್ಲದೆ, ಚಿಕ್ಕಹಾರೋಹಳ್ಳಿ, ದೊಡ್ಡಹಾರೋಹಳ್ಳಿ, ತಡಗವಾಡಿ, ಹುಣಸನಹಳ್ಳಿ, ಆಲಗೂಡು, ಚೊಟ್ಟನಹಳ್ಳಿ, ಪೀಹಳ್ಳಿ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. 9 ಮತ್ತು 10ನೇ ತರಗತಿಯಲ್ಲಿ ಒಟ್ಟು 245 ವಿದ್ಯಾರ್ಥಿಗಳಿದ್ದಾರೆ.

ಅಷ್ಟೂ ವಿದ್ಯಾರ್ಥಿಗಳು ಬಿಸಿಯೂಟದಿಂದ ವಂಚಿತರಾ ಗಿದ್ದಾರೆ. ಮೇ 30ರಂದು ಶಾಲೆ ಆರಂಭವಾಗಿದ್ದು ಇದುವರೆಗೆ ಮಧ್ಯಾಹ್ನದ ಬಿಸಿಯೂಟ ಕೊಡುತ್ತಿಲ್ಲ. ಬಿಸಿಯುೂಟ ತಯಾರಿಸುವ ನಾಲ್ವರು ಬಂದು ಹಾಗೆ ಹೋಗುತ್ತಿದ್ದಾರೆ.

`ಶಾಲೆ ಆರಂಭವಾಗಿ ಇಷ್ಟು ದಿನ ಕಳೆದರೂ ರೇಷನ್ ಕೊಟ್ಟಿಲ್ಲ. ಕೈಯಿಂದ ಹಣ ಹಾಕಿ 245 ಮಕ್ಕಳಿಗೆ ಊಟ ಹಾಕುವುದು ಕಷ್ಟ. ಅಕ್ಕಿ, ಬೇಳೆ ಬಂದಿಲ್ಲ. ಈ ಕುರಿತು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಿಗೆ ಮಾಹಿತಿ ನೀಡಿದ್ದೇನೆ ಎಂದು ಶಾಲೆಯ ಮುಖ್ಯ ಶಿಕ್ಷಕ ಸಿದ್ದರಾಜು ಅವರ ವಿವರಣೆ.
 
ಕೊಡಿಯಾಲ ಶಾಲೆಯಲ್ಲಿ ಬಿಸಿಯೂಟ ಸ್ಥಗಿತಗೊಂಡಿರುವ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಯೋಜನೆಯ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್ ಹೇಳುತ್ತಾರೆ. `ಅಕ್ಕಿ, ಬೇಳೆ ಕೊರತೆ ಕಾರಣ ನೀಡಿ ಬಿಸಿಯೂಟ ನಿಲ್ಲಿಸುವಂತಿಲ್ಲ. ಪಕ್ಕದ ಶಾಲೆಗಳಿಂದ ತರಿಸಿ ಊಟ ಹಾಕಬೇಕು. ಕೊಡಿಯಾಲ ಶಾಲೆಯ ಮುಖ್ಯ ಶಿಕ್ಷಕರಿಗೆ ನೊಟೀಸ್ ನೀಡಿಲಾಗುವುದು~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.