ADVERTISEMENT

ಹಲಗೂರು-ಮುತ್ತತ್ತಿ ಸಂಪರ್ಕ ಕಡಿತ

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 6:51 IST
Last Updated 5 ಆಗಸ್ಟ್ 2013, 6:51 IST

ಹಲಗೂರು: ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯದಿಂದ ಹೆಚ್ಚು ನೀರು ಬಿಟ್ಟಿರುವ ಪರಿಣಾಮ ಮುತ್ತತ್ತಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಲಗೂರು-ಮುತ್ತತ್ತಿ ರಸ್ತೆಯ ಕೆಸರಕ್ಕಿಹಳ್ಳದಲ್ಲಿ ಹಿನ್ನೀರು ಹೆಚ್ಚಿದ್ದು ಸಂಪರ್ಕ ಕಡಿದಿದೆ. ಸಾತನೂರು ಮಾರ್ಗವಾಗಿ ಮುತ್ತತ್ತಿಗೆ ಬರುವ ಸಂಪರ್ಕ ರಸ್ತೆಯ ಸೇತುವೆ ಜಲಾವೃತ್ತಗೊಂಡಿದೆ. ನಿತ್ಯ ನದಿಯ ನೀರು ಹೆಚ್ಚುತಿದ್ದು ಪ್ರವಾಸಿಗರು ಮತ್ತು ಮುತ್ತತ್ತಿ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಪೊಲೀಸ್ ಇಲಾಖೆ ನದಿಗೆ ಇಳಿಯದಂತೆ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಿದೆ.

ನದಿಯಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಭಾನುವಾರ ಪ್ರವಾಸಿಗರ ದಂಡೆ ಮುತ್ತತ್ತಿಗೆ ಆಗಮಿಸಿತು. ಮುತ್ತತ್ತಿ ಸಂಪರ್ಕ ರಸ್ತೆಯ ಹಳ್ಳ-ಕೊಳ್ಳಗಳಲ್ಲಿ ಹಿನ್ನೀರು ನಿಂತ ಪರಿಣಾಮ ಸೇತುವೆಗಳು ಜಲಾವೃತಗೊಂಡಿದ್ದವು. ನೀರಿನಲ್ಲಿಯೇ ವಾಹನ ಚಲಿಸಿದವು. ನೀರಿನಲ್ಲಿ ಸಿಕ್ಕಿಕೊಂಡ ವಾಹನಗಳನ್ನು ಎಳೆಯಲು ಪ್ರವಾಸಿಗರು ಪ್ರಯಾಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು. ಮತ್ತೆ ಕೆಲವು ವಾಹನಗಳು ಕೆಟ್ಟು ನಿಂತವು. ಮೊಬೈಲ್ ಸಂಪರ್ಕ ಇಲ್ಲದ ಪರಿಣಾಮ ಪ್ರಕೃತಿ ಸೊಬಗು ನೋಡಲು ಬಂದ ಜನರು ಪರದಾಡಿದರು. ಕೆಲವು ಜನರು ಸೇತುವೆ ಆವೃತ್ತಗೊಂಡ ನೀರಿನಲ್ಲಿಯೇ ರಸ್ತೆ ದಾಟುವ ಸಾಹಸ ಮಾಡಿದರು. ಮತ್ತೆ ಕೆಲವರು ನಿರಾಶೆಯಿಂದ ವಾಪಸ್ಸು ಊರಿಗೆ ತೆರಳಿದರು.

ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ನದಿಯಲ್ಲಿ ಹರಿಯುತ್ತಿದೆ. ಹಿಂದೆಂದೂ ಕಾಣದ ಮಟ್ಟದಲ್ಲಿ ನೀರಿನ ರಭಸವಿದೆ. ಬಹುತೇಕ ಎರಡು ಕಡೆಯ ದಡ ಮೀರಿದೆ. ಮುತ್ತತ್ತಿ ಗ್ರಾಮದ ಸಮೀಪಕ್ಕೆ ನೀರು ರಾಚಿದೆ. ನೀರಿನ ಭೋರ್ಗರೆತ ಗ್ರಾಮಸ್ಥರ ನಿದ್ದೆ ಕೆಡಿಸಿದೆ.

ಮುತ್ತತ್ತಿ ಮೂಲಕ ಹರಿಯುವ ಕಾವೇರಿ ನದಿ ನೀರು ಸಂಪೂರ್ಣ ತಮಿಳುನಾಡು ಪಾಲಾಗುತ್ತಿದೆ. ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಿದರೆ ಅಂತರ್ಜಲ ಹೆಚ್ಚುತ್ತದೆ. ಅಲ್ಲದೆ ಪ್ರಾಣಿಸಂಕುಲಕ್ಕೆ ನೀರಿನ ಕೊರತೆ ನೀಗುತ್ತದೆ. ಇಲ್ಲಿ ಹೆಚ್ಚುವರಿ ನೀರು ಸಂಗ್ರಹ ಮಾಡುವುದರಿಂದ ತಮಿಳುನಾಡು ನೀರಿನ ಬೇಡಿಕೆ ಇಟ್ಟಾಗ ಒದಗಿಸಲು ಸಹಕಾರಿಯಾಗುತ್ತದೆ. ಇದರಿಂದ ಕೆ.ಆರ್.ಎಸ್ ಅಣೆಕಟ್ಟಿನ ನೀರನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳ ಬಹುದು ಎಂದು ಎಂ. ಜಯಶಂಕರ್ ತಿಳಿಸುತ್ತಾರೆ. `ಮುತ್ತತ್ತಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ಮುತ್ತತ್ತಿಗೆ ಹೋಗುವ ಸಂಪರ್ಕ ರಸ್ತೆಗಳ ಸೇತುವೆಗಳು ಜಲಾವೃತ ಗೊಂಡಿವೆ. ಗ್ರಾಮಸ್ಥರು ಮತ್ತು ಪ್ರವಾಸಿಗರು ತುಂಬಾ ಎಚ್ಚರಿಕೆ ಯಿಂದಿರಬೇಕು. ಯಾವುದೇ ಗೊಡ್ಡು ಸಾಹಸಕ್ಕೆ ಕೈಹಾಕಬಾರದು' ಎಂದು ಆರಕ್ಷಕ ಉಪನಿರೀಕ್ಷಕ  ಎಸ್. ಗಂಗಾಧರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.