ADVERTISEMENT

ಹಳ್ಳಿಗಾಡಿನ ಟೆನ್ನಿಕಾಯ್ಟ್‌ ಪ್ರತಿಭೆ ಅನಿಕೇತನ್‌

ರಾಷ್ಟ್ರಮಟ್ಟದ ಟೂರ್ನಿಗೆ ಆಯ್ಕೆ, ಡಿಸೆಂಬರ್‌ನಲ್ಲಿ ಸ್ಪರ್ಧೆ

ಮಧುಸೂದನ ಮದ್ದೂರು
Published 5 ಡಿಸೆಂಬರ್ 2018, 14:29 IST
Last Updated 5 ಡಿಸೆಂಬರ್ 2018, 14:29 IST
ಪುರಸ್ಕಾರದೊಂದಿಗೆ ಟೆನಿಕಾಯ್ಟ್‌ ಕ್ರೀಡಾಪಟು ಆರ್‌.ಎನ್‌.ಅನಿಕೇತನ್‌
ಪುರಸ್ಕಾರದೊಂದಿಗೆ ಟೆನಿಕಾಯ್ಟ್‌ ಕ್ರೀಡಾಪಟು ಆರ್‌.ಎನ್‌.ಅನಿಕೇತನ್‌   

ಮದ್ದೂರು: ಮನೆಯಂಗಳದಲ್ಲಿ ಮಕ್ಕಳೊಂದಿಗೆ ಬಾಲ್ಯದಲ್ಲಿ ಆಡುತ್ತಿದ್ದ ರಿಂಗ್‌ ಎಸೆಯುವ ಆಟ ಮುಂದೊಮ್ಮೆ ತನ್ನನ್ನು ರಾಷ್ಟ್ರಮಟ್ಟದ ಟೆನ್ನಿಕಾಯ್ಟ್‌ ಟೂರ್ನಿಗೆ ಸಿದ್ಧಗೊಳಿಸುತ್ತದೆ ಎಂಬ ಕಲ್ಪನೆ ಈ ಹುಡುಗನ ಮನಸ್ಸಿನಲ್ಲಿ ಮೂಡಿಸಿರಲಿಲ್ಲ.

ಆರ್‌.ಎನ್‌.ಅನಿಕೇತನ್‌ ಎಂಬ ಹಳ್ಳಿಗಾಡಿನ ಹುಡುಗ ಇದೀಗ ಟೆನ್ನಿಕಾಯ್ಟ್‌ ಕ್ರೀಡೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಸಮೀಪದ ಕೆ.ಹೊನ್ನಲಗೆರೆ ಗ್ರಾಮದ ಆರ್‌.ಕೆ. ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ಅನಿಕೇತನ್‌ ಅಕ್ಟೋಬರ್‌ 16ರಂದು ಚಾಮರಾಜನಗರದಲ್ಲಿ ನಡೆದ ರಾಜ್ಯಮಟ್ಟದ ಟೆನ್ನಿಕಾಯ್ಟ್‌ ಟೂರ್ನಿಯಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಪಂಜಾಬ್‌ನಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಟೂರ್ನಿಗೆ ಆಯ್ಕೆಯಾಗಿರುವ ರಾಜ್ಯದ ಐವರು ಆಟಗಾರರಲ್ಲಿ ಇವರೂ ಒಬ್ಬರು.

ಮಳವಳ್ಳಿ ತಾಲ್ಲೂಕಿನ ರಾವಣಿ ಗ್ರಾಮದ ಕೃಷಿಕ ನಂಜುಂಡಸ್ವಾಮಿ– ರೇಣುಕಾ ದಂಪತಿಯ ಮಗನಾಗಿ ಜನಿಸಿದ ಅನಿಕೇತನ್‌ ಅವರಿಗೆ ಬಾಲ್ಯದಿಂದಲೂ ಆಟೋಟಗಳೆಂದರೆ ಅಚ್ಚುಮೆಚ್ಚು. ಮಳವಳ್ಳಿಯ ರೋಟರಿ ಪ್ರೌಢಶಾಲೆಯಲ್ಲಿ ಓದುವಾಗಲೇ 100 ಮೀಟರ್‌, 200ಮೀಟರ್‌ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಥ್ರೋಬಾಲ್‌, ಕಬಡ್ಡಿ ಆಟಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಬಹುಮಾನ ಪಡೆದಿದ್ದರು. ಕಾಲೇಜು ವ್ಯಾಸಂಗಕ್ಕಾಗಿ ಆರ್‌.ಕೆ. ಪಿಯು ಕಾಲೇಜಿಗೆ ಬಂದಾಗ ಇವರನ್ನು ಟೆನ್ನಿಕಾಯ್ಟ್‌ ಕ್ರೀಡೆ ಆಕರ್ಷಿಸಿತು. ಬೀದಿ ಬದಿಯಲ್ಲಿ ಎಸೆದಾಡುತ್ತಿದ್ದ ರಿಂಗ್‌ ಆಟಕ್ಕೆ ನಿಯಮಾವಳಿಗಳಿವೆ ಎಂದು ತಿಳಿದಿದ್ದು ಇಲ್ಲಿಗೆ ಬಂದ ನಂತರವೇ.

ADVERTISEMENT

ಕ್ರೀಡಾ ತರಬೇತುದಾರ ಅನುಕುಮಾರ್‌ ಅವರ ಮಾರ್ಗದರ್ಶನದಲ್ಲಿ ಟೆನ್ನಿಕಾಯ್ಟ್‌ ಆಟದ ಎಲ್ಲ ಚಾತುರ್ಯಗಳನ್ನು ಕಲಿತ ಅನಿಕೇತನ್‌ ಆಟಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಇದರ ಪರಿಣಾಮ ಇದೀಗ ರಾಷ್ಟ್ರಮಟ್ಟದ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿ ಏಷ್ಯನ್‌ ಸ್ಕೂಲ್‌ ಗೇಮ್ಸ್‌ ಅಂತರರಾಷ್ಟ್ರೀಯ ಟೂರ್ನಿಯಲ್ಲೂ ಪಾಲ್ಗೊಳ್ಳುವ ಹಂಬಲ ಹೊಂದಿದ್ದಾರೆ.

ಸದ್ಯ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ವಾಸ್ತವ್ಯ ಹೂಡಿರುವ ಅನಿಕೇತನ್‌ ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾರೆ. ಇವರ ಕ್ರೀಡಾ ಸಾಧನೆಗೆ ಕಾಲೇಜಿನ ಆಡಳಿತಾಧಿಕಾರಿ ಡಾ.ಸತೀಶ್‌ಬಾಬು ಪ್ರೋತ್ಸಾಹ ತುಂಬುತ್ತಿರುವುದು ಈ ಹುಡುಗನ ಕ್ರೀಡಾ ಉತ್ಸಾಹ ನೂರ್ಮಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.