ADVERTISEMENT

ಹುಟ್ಟೂರಿನಲ್ಲಿ ಯೋಧನ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2011, 8:15 IST
Last Updated 27 ಜೂನ್ 2011, 8:15 IST
ಹುಟ್ಟೂರಿನಲ್ಲಿ ಯೋಧನ ಅಂತ್ಯಕ್ರಿಯೆ
ಹುಟ್ಟೂರಿನಲ್ಲಿ ಯೋಧನ ಅಂತ್ಯಕ್ರಿಯೆ   

ಮಂಡ್ಯ: ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಯೋಧ ಮಧುಕುಮಾರ್ (23) ಅವರ ಅಂತ್ಯಕ್ರಿಯೆ ಸ್ವಗ್ರಾಮ ಹನಿಯಂಬಾಡಿ ಗ್ರಾಮದಲ್ಲಿ ಭಾನುವಾರ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಅಂತ್ಯ ಸಂಸ್ಕಾರ ವೇಳೆ ಕುಟುಂಬ ಸದಸ್ಯರ ರೋಧನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಸೂತಕ ಛಾಯೆ ಆವರಿತ್ತು. ಇದಕ್ಕೂ ಮುನ್ನ ಸಿಆರ್‌ಪಿಎಫ್ ಸೈನಿಕರು ಮೃತನಿಗೆ ಅಂತಿಮ ಗೌರವ ಸಲ್ಲಿಸಿದರು. ಆದರೆ, ಯೋಧನ ಸಾವು ಆತ್ಮಹತ್ಯೆಯಾಗಿದ್ದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ವೇಳೆ ಯಾವುದೇ ರೀತಿಯ ಸರ್ಕಾರಿ ಗೌರವ ಸಲ್ಲಿಸಲಾಗಲಿಲ್ಲ.

ಮಧುಕುಮಾರ್ ಅವರ ಪಾರ್ಥಿವ ಶರೀರವನ್ನು ಕಾಶ್ಮೀರದಿಂದ ವಿಮಾನದಲ್ಲಿ ಬೆಂಗಳೂರಿಗೆ ತಂದು, ಅಲ್ಲಿಂದ ಸೇನಾ ವಾಹನದಲ್ಲಿ ಹನಿಯಂಬಾಡಿ ಗ್ರಾಮಕ್ಕೆ ಶನಿವಾರ ರಾತ್ರಿ ತರಲಾಗಿತ್ತು. ಭಾನುವಾರ ಬೆಳಿಗ್ಗೆ 10.40ಕ್ಕೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಿಆರ್‌ಪಿಎಫ್ ಡಿಐಜಿ ಅರಕೇಶ್, ಬೆಂಗಳೂರು ಯಲಹಂಕ ಜಿಸಿ ಸಬ್‌ಇನ್ಸ್‌ಪೆಕ್ಟರ್ ಪಿ. ಸತ್ರಗಿರಿ, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಗ್ರಾಮದ ಮುಖಂಡರು, ಬಂಧುಗಳು ಹಾಜರಿದ್ದರು.

ಯೋಧ ಮಧುಕುಮಾರ್, ಹನಿಯಂಬಾಡಿ ಗ್ರಾಮದ ಕರಿಸಿದ್ದೇಗೌಡ ಮತ್ತು ಹೊನ್ನಮ್ಮ ದಂಪತಿ ಪುತ್ರ. ಕಳೆದ 2 ವರ್ಷದ ಹಿಂದೆ ಕೇಂದ್ರ ಮೀಸಲು ಪಡೆಗೆ ಆಯ್ಕೆಯಾಗಿ, ತರಬೇತಿ ಅವಧಿ ಪೂರೈಸಿದ ನಂತರ ಕೆಲ ತಿಂಗಳಿಂದ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
 
ಈಚೆಗೆ ಸ್ವಗ್ರಾಮಕ್ಕೆ ಬಂದಿದ್ದ ಮಧುಕುಮಾರ್, ಕುಟುಂಬದೊಂದಿಗೆ ಸುಮಾರು 20 ದಿನ ಕಳೆದು ನಂತರ, ಕಾಶ್ಮೀರಕ್ಕೆ ತೆರಳಿ ಕರ್ತವ್ಯಕ್ಕೆ ಸೇರ್ಪಡೆ ಆಗಿದ್ದರು. ಆದರೆ, ಶುಕ್ರವಾರ(ಜೂ. 24) ರೈಫಲ್‌ನಿಂದ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.