ಮದ್ದೂರು: ಬೇಸಿಗೆ ಬಿಸಿಲ ದಗೆಯ ನಡುವೆ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನಸಾಗರ. ಜಗದ್ಗುರುಗಳ ಆರ್ಶೀವಚನ. ಅದ್ಧೂರಿ ವೇದಿಕೆಯಲ್ಲಿ ಹೊಸ ಬಾಳಿಗೆ ಅಡಿಯಿಟ್ಟ 75 ಜೊತೆ ವಧು ವರರು. ಸೀಮಂತ ಕಾರ್ಯದಲ್ಲಿ ಪಾಲ್ಗೊಂಡ 1200ಕ್ಕೂ ಹೆಚ್ಚು ಮಹಿಳೆಯರು.
ಇದು ಪಟ್ಟಣದ ಉಗ್ರನರಸಿಂಹಸ್ವಾಮಿ ದೇಗುಲ ಆವರಣದಲ್ಲಿ ಡಿ.ಸಿ.ತಮ್ಮಣ್ಣ ಅಭಿಮಾನಿ ಬಳಗ ಹಾಗೂ ಡಾ.ಜೈಭೀಮ್ ದಲಿತ ಜಾಗೃತಿ ಸಮಿತಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಅವರ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಹಾಗೂ ಗರ್ಭೀಣಿಯರಿಗೆ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.
ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಸುತ್ತೂರು ಶ್ರೀಕ್ಷೇತ್ರದ ಶಿವಾನಂದಸ್ವಾಮೀಜಿ, ಕುಣಿಗಾಲ್ ಗೌರಿಶಂಕರ ಮಠದ ಸಿದ್ದರಾಮೇಶ್ವರ ಸ್ವಾಮೀಜಿ, ಸಾಲೂರು ಮಠದ ಗುರುಸ್ವಾಮೀಜಿ ಅವರ ಆರ್ಶಿವಾದಗಳೊಂದಿಗೆ ಖ್ಯಾತ ಆಗಮಿಕ ದೇತಿ ಕೃಷ್ಣಮೂರ್ತಿ ಅವರ ಪೌರೋಹಿತ್ಯದಲ್ಲಿ 75 ಜೋಡಿ ವಧುವರರು ಹೊಸ ಬಾಳಿಗೆ ಅಡಿಯಿಟ್ಟರು.
ವಿಶ್ವ ಒಕ್ಕಲಿಗರ ಮಹಾಮಠದ ಚಂದ್ರಶೇಖರನಾಥ ಸ್ವಾಮೀಜಿ ವಿವಾಹ ಕಾರ್ಯಕ್ಕೆ ಚಾಲನೆ ನೀಡಿದರು.
ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಪ್ರಸ್ತಾವಿಕ ಮಾತನಾಡಿ, ಕಳೆದ 10 ವರ್ಷಗಳಿಂದ ನನ್ನ ಹುಟ್ಟು ಹಬ್ಬದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿದ್ದು, 850 ವಧು ವರರು ಹೊಸಬಾಳಿಗೆ ಅಡಿಯಿಟ್ಟಿದ್ದಾರೆ ಎಂದು ತಿಳಿಸಿದರು.
ಹೆಸರಾಂತ ಪ್ರವಚನಕಾರ ಪಾವಗಡ ಪ್ರಕಾಶ್ ಮಾತನಾಡಿದರು. ಉದ್ಯಮಿ ಉಮಾಪತಿ ಮಾತನಾಡಿ, ಪಟ್ಟಣದ ಉಗ್ರನರಸಿಂಹಸ್ವಾಮಿ ದೇಗುಲದ ರಥದ ಬೀದಿಗೆ ಕಾಂಕ್ರಿಟ್ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಉದ್ಯಮಿ ಚನ್ನಾರೆಡ್ಡಿ ಮಾತನಾಡಿ, ಇಂದು ಹೊಸಬಾಳಿಗೆ ಅಡಿಯಿಡುತ್ತಿರುವ ನವದಂಪತಿಗಳಿಗೆ ಬ್ಯಾಂಕಿನಲ್ಲಿ ಖಾತೆ ತೆರೆದು 10 ಸಾವಿರ ರೂಪಾಯಿ ಠೇವಣಿ ಇರಿಸುವುದಾಗಿ ಹೇಳಿದರು.
ಆಲೂರು-ವೈದ್ಯನಾಥಪುರ ಸೇತುವೆ ನಿರ್ಮಾಣಕ್ಕೆ ಕಾರಣರಾದ ಕೆಆರ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಚ್.ಅನಿಲ್‌ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉದ್ಯಮಿ ನಿಶಾಂತ ರಾಂಖ, ಮಾಜಿ ವಿಧಾನಪರಿಷತ್ ಸದಸ್ಯ ಏಜಾಸುದ್ದಿನ್, ಹಿರಿಯ ಅಧಿಕಾರಿ ಜಯದೇವು, ಡಿ.ಸಿ.ತಮ್ಮಣ್ಣ ಅವರ ಪತ್ನಿ ಪ್ರಮೀಳಾ ತಮ್ಮಣ್ಣ, ಪುತ್ರ ಡಿ.ಟಿ.ಸಂತೋಷ್, ಸೊಸೆ ಕವಿತಾ ಪಾಲ್ಗೊಂಡಿದ್ದರು.
ಗಮನ ಸೆಳೆದ ಸೀಮಂತ: ಸೀಮಂತ ಕಾರ್ಯಕ್ರಮದಲ್ಲಿ 1200ಕ್ಕೂ ಹೆಚ್ಚು ಗರ್ಭೀಣಿ ಮಹಿಳೆಯರಿಗೆ ಸೀರೆ, ರವಿಕೆ ಕಣ, ಫಲ ತಾಂಬೂಲ, ಸಿಹಿ ಲಾಡು, ಅರಿಶಿನ ಕುಂಕುಮ ಬಳೆಗಳನ್ನು ಒಳಗೊಂಡಿದ್ದ ಮಡಿಲು ಚೀಲಗಳನ್ನು ವಿತರಿಸಲಾಯಿತು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ 30ಸಾವಿರಕ್ಕೂ ಹೆಚ್ಚು ಜನರಿಗೆ ಸಿಹಿ ಲಾಡು ಸೇರಿದಂತೆ ಭೂರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.