ADVERTISEMENT

‘ಕವಿ ಅನಧಿಕೃತ ಶಾಸಕ’: ಡಾ.ಪಳನಿಸ್ವಾಮಿ

ದೀಪಾವಳಿ ಕವಿಗೋಷ್ಠಿ: ಕಾವ್ಯಗಳ ರಸಧಾರೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 7:58 IST
Last Updated 25 ಅಕ್ಟೋಬರ್ 2014, 7:58 IST

ಶ್ರೀರಂಗಪಟ್ಟಣ: ಆರೋಗ್ಯಕರ ಸಮಾಜದ ಬಗ್ಗೆ ಚಿಂತಿಸುವ, ಅದಕ್ಕೆ ಪೂರಕವಾದ ಸಾಹಿತ್ಯ ಸೃಜಿಸುವ ಕವಿ ಅನಧಿಕೃತ ಶಾಸಕ’ ಎಂದು ಕವಿ ಡಾ. ಪಳನಿಸ್ವಾಮಿ ಮುಡುಗೂರು ಅಭಿಪ್ರಾಯಪಟ್ಟರು.


  ಪಟ್ಟಣದಲ್ಲಿ ಯುವ ಬರಹಗಾರರ ಬಳಗ ಹಾಗೂ ಸರ್ಕಾರಿ ಜೂನಿಯರ್‌ ಕಾಲೇಜಿನ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘ ಶುಕ್ರವಾರ ಏರ್ಪಡಿಸಿದ್ದ ದೀಪಾವಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಮಾನ್ಯ ಜನರಿಗೆ ನಿಲುಕದ ವಿಷಯನ್ನು ಕವಿ ಕಾಣಬಲ್ಲ. ತಪ್ಪು– ಒಪ್ಪುಗಳ ಬಗ್ಗೆ ವಿಮರ್ಶೆ ಮಾಡುವ ಶಕ್ತಿ ಕೂಡ ಆತನಿಗೆ ಇರುತ್ತದೆ. ವಿದ್ವಜ್ಜನರ ಸಂಪರ್ಕ, ನಿರಂತರ ಅಧ್ಯಯನದಿಂದ ಕವಿ ಪರಿಪೂರ್ಣ ವ್ಯಕ್ತಿತ್ವ ಪಡೆಯುವ ಹಾದಿಯಲ್ಲಿ ಸಾಗುವುದರಿಂದ ಈ ಸಮಾಜದ ಆಸ್ತಿಯಾಗಿರುತ್ತಾನೆ. ಇತರರಿಗೆ ಮಾರ್ಗದರ್ಶಕನಾಗಿ, ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾನೆ. ಆದರೆ ಕವಿತ್ವ ಸಿದ್ದಿಸಲು ಆಳ ಅನುಭವ ಬೇಕು’ ಎಂದು ಹೇಳಿದರು.

ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ದಲಿತ ಸಾಹಿತಿ ಡಾ.ವಿ. ಮುನಿವೆಂಕಟಪ್ಪ, ‘ಕವಿತೆ ಪುಗಸಟ್ಟೆ ಪುನುಗಲ್ಲ. ಕೇವಲ ಪ್ರಾಸಗಳನ್ನು ಕಟ್ಟುವುದು, ನುಡಿಗಟ್ಟುಗಳನ್ನು ಪೋಣಿಸುವುದು, ಆಕರ್ಷಕ ಎನಿಸುವ ಶಬ್ದ ಬಳಕೆ ಉತ್ತಮ ಕಾವ್ಯ ರಚನೆ ಸಾಧ್ಯವಿಲ್ಲ. ಉಪಮೆ, ಅಲಂಕಾರಗಳ ಜತೆಗೆ ಬದಲಾವಣೆ ಹಾಗೂ ಉತ್ತಮ ನಿರೀಕ್ಷೆಗಳ ಸಂದೇಶವನ್ನು ಒಳಗೊಂಡ ಸಾಹಿತ್ಯ ರಚನೆಯಿಂದ ಮಾತ್ರ ಉತ್ತಮ ಕವಿತೆ ಜನ್ಮ ತಳೆಯಲು ಸಾಧ್ಯ’ ಎಂದರು.

ಪರಿಸರವಾದಿ ಡಾ.ಬಿ. ಸುಜಯಕುಮಾರ್‌ ಮಾತನಾಡಿ, ಕವಿಗೆ ವಾಚನ ಶೈಲಿ ಮುಖ್ಯ ಎಂದರು. ಯುವ ಬರಹಗಾರರ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಜವರೇಗೌಡ ಆಶಯ ಭಾಷಣ ಮಾಡಿದರು. ಶ್ರೀಕೃಷ್ಣ ಕಲಾ ಬಳಗದ ಅಧ್ಯಕ್ಷ ಎಚ್‌.ವಿ. ಗಣೇಶ್‌, ಸಿ.ಆರ್‌. ಪಾಪಣ್ಣ, ಎಪಿಎಂಸಿ ನಿರ್ದೇಶಕ ಕೆ.ಬಿ. ಮಹೇಶ್‌, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗಂಜಾಂ ನರಸಿಂಹಸ್ವಾಮಿ, ನೆಲದನಿ ಸಾಂಸ್ಕೃತಿಕ ಸಂಸ್ಥೆ ಸಂಚಾಲಕ ಭಕ್ತವತ್ಸಲ ಮಾತನಾಡಿದರು. ಬಳಗದ ತಾಲ್ಲೂಕು ಅಧ್ಯಕ್ಷ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಉಪಾಧ್ಯಕ್ಷ ಸಿ.ಎಸ್‌. ವೆಂಕಟೇಶ್‌, ಚಂದ್ರಶೇಖರ್‌, ಮಂಡ್ಯ ತಾಲ್ಲೂಕು ಘಟಕದ ಅಧ್ಯಕ್ಷ ಕೊತ್ತತ್ತಿ ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT