ADVERTISEMENT

‘ರೈತರ ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 7:04 IST
Last Updated 10 ಡಿಸೆಂಬರ್ 2013, 7:04 IST

ಮಂಡ್ಯ: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಆತ್ಮಹತ್ಯೆ ದಾರಿ ಹಿಡಿದಿರುವ ರೈತರನ್ನು ರಕ್ಷಿಸಲು ‘ರೈತರ ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಅಂಜಿರೆಡ್ಡಿ ಆಗ್ರಹಿಸಿದರು.

ಭಾರತೀಯ ಕಿಸಾನ್‌ ಸಂಘ ಮಂಡ್ಯ ಜಿಲ್ಲಾ ಘಟಕ ಸೋಮವಾರ ಇಲ್ಲಿನ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ, ‘ಮಂಡ್ಯ ಜಿಲ್ಲಾ ರೈತ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

ಆಡಳಿತ ನಡೆಸುವಂತಹ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ದೂರದೃಷ್ಟಿ ಇಲ್ಲದಿರುವುದರಿಂದಲೇ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದು, ಸಂಕಷ್ಟದಿಂದ ಪಾರುಮಾಡಲು ಕ್ಷೇಮಾಭಿವೃದ್ಧಿ ನಿಧಿ ಅವಶ್ಯವಿದೆ ಎಂದರು. ಸ್ವಾತಂತ್ರ್ಯ ನಂತರ, ರೈತರ ಉತ್ಪನ್ನಗಳನ್ನು ಹೊರತುಪಡಿಸಿದರೇ ಸರ್ಕಾರಿ ನೌಕರರ ಸಂಬಳ ಸೇರಿದಂತೆ ಇನ್ನಿತರೆ ಎಲ್ಲ ವಸ್ತುಗಳ ಬೆಲೆಯೂ ದಿನೇದಿನೇ ಏರುತ್ತಲೇ ಇದೆ. ರೈತರ ಬಗೆಗೆ ಏಕೀ ತಾರತಮ್ಯ ಎಂದು ಕಿಡಿಕಾರಿದರು.

ಈ ಹಿಂದೆ ‘ಕೃಷಿ ಉತ್ತಮ, ವ್ಯಾಪಾರ ಮಧ್ಯಮ ಹಾಗೂ ನೌಕರಿ ಕನಿಷ್ಠ’ ಎನ್ನುವ ಮಾತಿತ್ತು. ಆದರೀಗ ಎಲ್ಲವೂ  ಉಲ್ಟಾಪಲ್ಟಾ ಆಗಿದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆಡಳಿತ ನಡೆಸುವವರಿಗೆ ಬೇಸಾಯದ ಸಮಸ್ಯೆ ಬಗೆಗೆ ಅರಿವಿಲ್ಲ. ಹೀಗಾಗಿ, ಕೃಷಿ ಕ್ಷೇತ್ರ ಗಂಡಾಂತರದಲ್ಲಿ ಸಿಲುಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಕಿಸಾನ್್ ಸಂಘದ ಕರ್ನಾಟಕ ಪ್ರದೇಶ ಅಧ್ಯಕ್ಷ ವೈ.ಎನ್್. ರಂಗನಾಥ್್ ಮಾತನಾಡಿ, ‘ರೈತನನ್ನು ದೇಶದ ಬೆನ್ನೆಲುಬು, ಅನ್ನದಾತ ಎಂದೆಲ್ಲಾ ಕೊಂಡಾಡುತ್ತಾರೆ. ದೇಶಕ್ಕೆ ಅನ್ನ ನೀಡುವ ರೈತನ ಬದುಕು ಇಂದು ಸುಖವಾಗಿದೆಯೇ ಎಂದು ಪ್ರಶ್ನಿಸಿದ ಅವರು, ರೈತನ ಬೆನ್ನು ಮುರಿಯುವ ಕೆಲಸ ನಡೆಯುತ್ತಿದೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

’ಮೂಗು ಹಿಡಿದರೆ, ಬಾಯಿ ತೆರೆಯುತ್ತದೆ’ ಎನ್ನುವ ಮಾತಿದೆ. ರೈತರು ಸರ್ಕಾರದ, ಜನಪ್ರತಿನಿಧಿಗಳ ಮೂಗು ಹಿಡಿಯುವ ಕೆಲಸ ಮಾಡಬೇಕು. ಆಗ ಮಾತ್ರವೇ ರೈತನ ಕೂಗಿಗೆ ಸ್ಪಂದನೆ ಸಿಗಲು ಸಾಧ್ಯ. ಸಮಸ್ಯೆಗಳಿಗೆ ಮುಕ್ತಿ ಬೇಕೆಂದರೆ, ರೈತರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿಯ ಶಾಖಾ ಮಠರುಷೋತ್ತಮಾನಮದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬೆಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಾನಪದ ವಿದ್ವಾಂಸ ಡಾ. ಹ.ಕ.ರಾಜೇಗೌಡ, ಚರ್ಮರೋಗ ಚಿಕಿತ್ಸಾ ತಜ್ಞ ಡಾ.ಎಸ್್.ಸಿ.ಶಂಕರಗೌಡ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಹಾಡ್ಯ ರಮೇಶ್‌ರಾಜು, ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.