ADVERTISEMENT

‘ಶಾಲೆಗಳಲ್ಲಿ ಸಂಗೀತ, ಯೋಗ ಶಿಕ್ಷಣ ನೀಡಬೇಕು’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 8:22 IST
Last Updated 26 ಸೆಪ್ಟೆಂಬರ್ 2013, 8:22 IST

ಮಂಡ್ಯ: ‘ಸಹಕಾರ ರತ್ನ’ ಡಾ. ಎಚ್.ಡಿ. ಚೌಡಯ್ಯ ಹೆಸರಿನಲ್ಲಿ ನೀಡುವ ಸಾಹಿತ್ಯ ಮತ್ತು ಕ್ರೀಡಾ ಪ್ರಶಸ್ತಿಯನ್ನು ಕ್ರಮವಾಗಿ ಪ್ರಾಧ್ಯಾಪಕಿ ಡಾ.ಪದ್ಮಾಶೇಖರ್‌ ಮತ್ತು ಕೆ.ಆರ್‌. ನಗರ ತಾಲ್ಲೂಕು ಮಾರ್ಚಳ್ಳಿಯ ಅಂಗವಿಕಲ ಕ್ರೀಡಾಪಟು ಡಿ. ಚೌಡಯ್ಯ ಅವರಿಗೆ ಪ್ರದಾನ ಮಾಡಲಾಯಿತು.

ಗ್ರಾಮೀಣ ಅಭಿವೃದ್ಧಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಣ್ಣೇಶ್ವರ ಗ್ರಾಮ ಪಂಚಾಯಿತಿಗೆ ನೀಡಿದ ಪ್ರಶಸ್ತಿಯನ್ನು ಗ್ರಾ.ಪಂ. ಅಧ್ಯಕ್ಷ ಎ. ಚಂದ್ರಶೇಖರ್‌ ಸ್ವೀಕರಿಸಿದರು.

ಡಾ.ಎಚ್‌.ಡಿ. ಚೌಡಯ್ಯ ಪ್ರತಿಷ್ಠಾನ 2013ನೇ ಸಾಲಿಗಾಗಿ ನೀಡಿದ ಈ ಪ್ರಶಸ್ತಿಗಳನ್ನು ನಗರದ ಪ್ಲೇಸ್‌ಮೆಂಟ್‌ ಸಭಾಂಗಣದಲ್ಲಿ ಬುಧವಾರ ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್‌ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ 10 ಸಾವಿರ ನಗದು, ಪ್ರಶಸ್ತಿಪತ್ರ, ಫಲಕ ನೀಡಿ ಗೌರವಿಸಲಾಯಿತು. ಅಲ್ಲದೆ, ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಹೊಳಲು ಗ್ರಾಮದ ಪ್ರೌಢಶಾಲೆಗಳ ವಿದ್ಯಾರ್ಥಿಗಳಾದ ಎಚ್‌.ಪಿ. ಆಶಿಕ್‌ ಗೌಡ, ಯು.ಸಿ. ಅಕ್ಷತಾ, ಎಚ್‌.ಆರ್‌. ಶಿವಾನಂದ ಮತ್ತು ಎಚ್‌.ಸಿ. ಅನುಷಾ ಅವರಿಗೆ ತಲಾ 1 ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

ನಂತರ ಮಾತನಾಡಿದ ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್, ‘ಸರ್ಕಾರಿ ಶಾಲೆಗಳಲ್ಲೂ ಪ್ರಾಥಮಿಕ ಶಾಲಾ ಹಂತದಿಂದಲೇ ಸಂಗೀತ ಮತ್ತು ಯೋಗ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ಅವರ ಬೌದ್ಧಿಕ  ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸವಾಗಬೇಕು’ ಎಂದು ಹೇಳಿದರು.

ಡಾ. ಎಚ್‌.ಡಿ. ಚೌಡಯ್ಯ ಹಾಗೂ ಅವರ ಪತ್ನಿ ದೊಡ್ಡಲಿಂಗಮ್ಮ, ಪ್ರತಿಷ್ಠಾನದ ಅಧ್ಯಕ್ಷ ಎಚ್‌. ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಪ್ರೊ. ಜಯಪ್ರಕಾಶ್‌ಗೌಡ, ಕಾರ್ಯದರ್ಶಿ ಆರ್‌.ಎಂ. ಸುಬ್ಬೇಗೌಡ, ಖಜಾಂಚಿ ಡಾ. ರಾಮಲಿಂಗಯ್ಯ, ಸಿಂಗ್ರಿಗೌಡ, ಎಚ್‌.ಎಲ್‌. ಶಿವಣ್ಣ ಇತರರು ಇದ್ದರು.

28ರಿಂದ ಕಾರ್ಯಾಗಾರ
ಮೈಸೂರು: ಐಐಎಚ್‌ಟಿ ಮೈಸೂರು ಶಾಖೆಯು ತನ್ನ 20ನೇ ವಾರ್ಷಿ­ಕೋತ್ಸವದ ಅಂಗವಾಗಿ ಸೆ. 28ರಂದು ‘ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್’ ಕುರಿತ ಕಾರ್ಯಾಗಾರ­ವನ್ನು ಏರ್ಪಡಿಸಿದೆ. ಆಸಕ್ತರು ಮೊ: 91417 68494 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.