ADVERTISEMENT

11 ಮಂದಿ ವಿರುದ್ಧ ಆರೋಪಪಟ್ಟಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:36 IST
Last Updated 17 ಸೆಪ್ಟೆಂಬರ್ 2013, 6:36 IST

ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಹಣ ವಂಚನೆಗೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ 11 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಪ್ರಮುಖವಾಗಿ ಹೆಮ್ಮನಹಳ್ಳಿಯ ಚಂದ್ರಶೇಖರ್‌, ಕೆಬ್ಬಳ್ಳಿ ಆನಂದ್‌, ನಾಗಲಿಂಗಸ್ವಾಮಿ, ಮುಡಾ ಆಯಕ್ತರಾಗಿದ್ದ ಶಿವರಾಮು, ಮುಡಾ ಲೆಕ್ಕಾಧಿಕಾರಿ ನಾಗರಾಜ, ಉಮರ್‌್ ಫಾರೂಕ್‌, ಕೆ.ಬಿ. ಹರ್ಷ, ರಮೇಶ್‌ ವಿರುದ್ಧ ವಂಚನೆಯ ವಿವಿಧ ಆರೋಪಗಳನ್ನು ಹೊರಿಸಲಾಗಿದೆ.
ಇಂಡಿಯನ್‌್ ಬ್ಯಾಂಕ್‌್, ಬ್ಯಾಂಕ್‌್ ಅಧಿಕಾರಿಗಳಾದ ರಾಮಸ್ವಾಮಿ, ಕುಮಾರನಾಯಕ ಅವರನ್ನೂ ಆರೋಪಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ, ಅವರ ವಿರುದ್ಧ ಯಾವುದೇ ದಾಖಲಾತಿಗಳು ಲಭ್ಯವಾಗಿಲ್ಲ. ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ. ಈ ಬಗ್ಗೆ ಬ್ಯಾಂಕ್‌ ಆಂತರಿಕ ತನಿಖೆ ನಡೆಸಬಹುದು ಎನ್ನುತ್ತಾರೆ ಪ್ರಕರಣದ ತನಿಖೆ ವಹಿಸಿಕೊಂಡಿದ್ದ ಡಾ.ಶೋಭಾರಾಣಿ.

ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳಾದ ರಮೇಶ್‌್ ಹಾಗೂ ಕೆ.ಬಿ. ಹರ್ಷ ತಲೆ ಮರೆಸಿಕೊಂಡಿದ್ದಾರೆ.
ಹೆಮ್ಮನಹಳ್ಳಿ ಚಂದ್ರಶೇಖರ್‌್ ಖಾತೆ ಹೋಗಿರುವ ಐದು ಕೋಟಿ ರೂಪಾಯಿ ಯಾರ ಖಾತೆಗೆ ಹೋಗಿದೆ ಎಂಬುದನ್ನು ಚೆಕ್‌್ ಸಮೇತ ಪತ್ತೆ ಹಚ್ಚಿರುವ ಪೊಲೀಸರು, ಆ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಎಆರ್‌ಎಸ್‌ ಪಿಕ್ಚರ್ಸ್‌ ಹಾಗೂ ಎ.ಆರ್. ಲಾಜಿಸ್ಟಿಕ್‌ ಎಂಬ ಎರಡು ಕಂಪೆನಿಗಳು ಕೆಬ್ಬಳ್ಳಿ ಆನಂದ್‌ ಅವರಿಗೆ ಸೇರಿದ್ದು, ಅವುಗಳಿಗೂ ಸೇರಿದಂತೆ ಒಟ್ಟು 2.90 ಕೋಟಿ ರೂಪಾಯಿ ಅವರಿಗೆ ಸಂದಾಯವಾಗಿದೆ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ ಎಂದು ’ಪ್ರಜಾವಾಣಿ’ಗೆ ಶೋಭಾರಾಣಿ ಅವರು ತಿಳಿಸಿದರು.

ಬೆಂಗಳೂರಿನ ಸ್ತ್ರೀಶಕ್ತಿ ಸೌಹಾರ್ದ ಸಂಘಕ್ಕೆ 60 ಲಕ್ಷ ರೂಪಾಯಿ ನೀಡಲಾಗಿದೆ. ಅದಲ್ಲದೇ, ಇನ್ನು ಕೆಲವರಿಗೆ 10 ಸಾವಿರದಿಂದ ಲಕ್ಷ ರೂಪಾಯಿಯವರೆಗೂ ಸಂದಾಯವಾಗಿದೆ. ಯಾವ ಕಾರಣಕ್ಕೆ ಹಣ ಸಂದಾಯ ಮಾಡಲಾಗಿತ್ತು ಎಂಬ ವಿವರವನ್ನು ಅವರಿಂದ ಪಡೆದುಕೊಳ್ಳಲಾಗಿದೆ. ಚಂದ್ರಶೇಖರ್‌್ ಹಾಗೂ ಕೆ. ಆನಂದ್‌್ ಅವರ ಖಾತೆಯಿಂದ ನೇರವಾಗಿ ಯಾವುದೇ ರಾಜಕೀಯ ನಾಯಕರ ಖಾತೆಗೆ ಹಣ ಹೋಗಿಲ್ಲ. ಯಾರ, ಯಾರ ಖಾತೆಗೆ ಇಲ್ಲಿಂದ ನೇರವಾಗಿ ಹೋಗಿದೆ. ಅವರೆಲ್ಲರಿಂದಲೂ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ ಎಂದರು.

ನಾಗಲಿಂಗಸ್ವಾಮಿಯನ್ನು ಬಂಧನ ಮಾಡಲು ಬಹಳಷ್ಟು ಶ್ರಮಪಡಬೇಕಾಯಿತು. ಊಟ, ನಿದ್ರೆಯಿಲ್ಲದೇ ಸಾವಿರಾರು ಕಿ.ಮೀ. ದೂರ ಪ್ರಯಾಣ ಮಾಡಿದ್ದೇವೆ. ಮುಡಾ ಆಯುಕ್ತರಿಂದ ಚೆಕ್‌ಗಳನ್ನು ಇವನೇ ಪಡೆದುಕೊಂಡಿದ್ದಾನೆ ಎಂದು ತಿಳಿಸಿದರು. ಕೆ. ಆನಂದ್‌್ ಅವರ ಮನೆಯಲ್ಲಿ ಬಹಳಷ್ಟು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ವಿದೇಶದಲ್ಲಿ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಕಂಡು ಬರುವುದಿಲ್ಲ ಎಂದರು.

ಈಗಾಗಲೇ ಪ್ರಕರಣವನ್ನು ಸಿಐಡಿಗೆ ವಹಿಸಿಕೊಡಲಾಗಿದೆ. ಇನ್‌ಸ್ಪೆಕ್ಟರ್‌ ಜನಾರ್ದನ ಅವರಿಗೆ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ. ಮುಂದಿನ ತನಿಖೆಯನ್ನು ಅವರೇ ನಡೆಸಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.