ADVERTISEMENT

₹1.1 ಲಕ್ಷಕ್ಕೆ ಬಂಡೂರು ತಳಿ ಟಗರು ಮಾರಾಟ!

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 13:20 IST
Last Updated 4 ಜೂನ್ 2023, 13:20 IST
₹1.1 ಲಕ್ಷಕ್ಕೆ ಖರೀದಿಯಾದ ಬಂಡೂರು ತಳಿ ಟಗರು
₹1.1 ಲಕ್ಷಕ್ಕೆ ಖರೀದಿಯಾದ ಬಂಡೂರು ತಳಿ ಟಗರು   

ಹಲಗೂರು(ಮಂಡ್ಯ) : ಬಂಡೂರು  ತಳಿಯ ಟಗರೊಂದು ₹1.1 ಲಕ್ಷ ಬೆಲೆಗೆ ಮಾರಾಟವಾಗಿದ್ದು,  ಹುಚ್ಚೇಗೌಡನದೊಡ್ಡಿ ಗ್ರಾಮದ ನಿವಾಸಿ ಮರೀಗೌಡ ಎಂಬುವವರು ಬಂಡೂರು ತಳಿಯ ಟಗರನ್ನು ಹುಸ್ಕೂರು ಗ್ರಾಮದಿಂದ ಖರೀದಿಸಿ ಸ್ವಗ್ರಾಮಕ್ಕೆ ಮೆರವಣಿಗೆಯಲ್ಲಿ ಸಾಗಿಸಿದರು.

ಹುಸ್ಕೂರು, ಅಪ್ಪಾಜಯ್ಯನದೊಡ್ಡಿ, ಬಾಣಗಹಳ್ಳಿ, ಅಂತರವಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ಮಂದಿ  ದುಬಾರಿ ಹಣ ನೀಡಿ ಖರೀದಿ ಮಾಡಿದ ಬಂಡೂರು ತಳಿಯ ಟಗರನ್ನು ಕುತೂಹಲದಿಂದ ವೀಕ್ಷಿಸಿದರು.

ಟಗರು ಖರೀದಿಸಿದ ಮರೀಗೌಡ ಮಾತನಾಡಿ, ನಾನು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಕುರಿ ಸಾಕಣೆ ನನ್ನ ಆದಾಯದ ಉತ್ತಮ ಕಾಯಕ ಆಗಿದೆ. ನನ್ನ ಮನೆಯಲ್ಲಿ ಐವತ್ತು ಸಾಮನ್ಯ ತಳಿಯ ಕುರಿಗಳಿವೆ. ರಾಜ್ಯದಲ್ಲಿ ರುಚಿಯಾದ ಮಾಂಸಕ್ಕೆ ಪ್ರಖ್ಯಾತಿ ಹೊಂದಿರುವ ಬಂಡೂರು ತಳಿಯ ಕುರಿಯನ್ನು ಸಂವರ್ಧನೆ ಮಾಡಬೇಕೆಂದು ನಿರ್ಧರಿಸಿ ದೇವಿಪುರ ಗ್ರಾಮದಿಂದ ಹದಿನೆಂಟು ತಿಂಗಳು ತುಂಬಿರುವ ಟಗರನ್ನು ₹1.1 ಲಕ್ಷ ನೀಡಿ ಖರೀದಿ ಮಾಡಿದ್ದೇನೆ. ಟಗರು ಅತ್ಯಂತ ದಷ್ಟ ಪುಷ್ಟವಾಗಿದ್ದು, ತಳಿ ಸಂವರ್ಧನೆಗೆ ಬೀಜದ ಟಗರು ಸಿಕ್ಕಿರುವುದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

ಕುಲುಮೆದೊಡ್ಡಿ ಕುಮಾರ್ ಮಾತನಾಡಿ,  ನಮ್ಮ ತಾಲ್ಲೂಕಿನ ಬಂಡೂರು ತಳಿ ಕುರಿ ಸುಪ್ರಸಿದ್ಧಿ ಪಡೆದಿರುವುದು ಹೆಮ್ಮೆಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಈ ತಳಿ ಕಣ್ಮರೆಯಾಗುತ್ತಿದೆ. ಉತ್ತಮ ತಳಿಯ ಟಗರು ಖರೀದಿಯಿಂದ ಸ್ಥಳೀಯ ಕುರಿ ಸಾಕಣೆದಾರರು ಬಂಡೂರು ತಳಿ ಸಂವರ್ಧನೆ ಮಾಡಲು ಸಹಕಾರಿಯಾಗಲಿದೆ ಎಂದರು.

 ಗ್ರಾಮಸ್ಥರಾದ ಟಿ.ರವಿ, ಬೆಟ್ಟೇಗೌಡ, ಕೆಂಪೇಗೌಡ, ಪಾಪಣ್ಣ, ಮಂಜು, ಕುಮಾರ್, ನಾಗರಾಜು, ಎಚ್.ಕೆ. ಕೆಂಪೇಗೌಡ, ಎಚ್.ಕೆ.ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.