ADVERTISEMENT

ಶ್ರೀರಂಗಪಟ್ಟಣ: ನಾಲೆಯಲ್ಲಿ ಮುಳುಗಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:54 IST
Last Updated 23 ಏಪ್ರಿಲ್ 2021, 4:54 IST
ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್‌ ಬಳಿ ವಿಶ್ವೇಶ್ವರಯ್ಯ ನಾಲೆಯಲ್ಲಿ ಗುರುವಾರ ಈಜಲು ಇಳಿದ ಇಬ್ಬರು ನೀರಿನಲ್ಲಿ ಮುಳುಗಿದ ಸ್ಥಳದಲ್ಲಿ ಜನರು ಗುಂಪುಗೂಡಿದ್ದರು
ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್‌ ಬಳಿ ವಿಶ್ವೇಶ್ವರಯ್ಯ ನಾಲೆಯಲ್ಲಿ ಗುರುವಾರ ಈಜಲು ಇಳಿದ ಇಬ್ಬರು ನೀರಿನಲ್ಲಿ ಮುಳುಗಿದ ಸ್ಥಳದಲ್ಲಿ ಜನರು ಗುಂಪುಗೂಡಿದ್ದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಸಮೀಪದ ನಾರ್ತ್‌ಬ್ಯಾಂಕ್‌ ಗ್ರಾಮದ ದೇವಾಲಯಕ್ಕೆ ಗುರುವಾರ ಪೂಜೆಗೆ ಬಂದಿದ್ದ ಇಬ್ಬರು ವಿಶ್ವೇಶ್ವರಯ್ಯ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ ಮಲ್ಲಿನಾಥಪುರ ಗ್ರಾಮದ ಕರೀಗೌಡ ಎಂಬವರ ಮಗ ಬಸವೇಗೌಡ (26) ಮತ್ತು ಜವರೇಗೌಡ ಅವರ ಮಗ ಸಣ್ಣೇಗೌಡ (34) ಮೃತಪಟ್ಟವರು.

ಮುಳುಗಿದ ಸ್ಥಳದಿಂದ ತುಸು ದೂರದಲ್ಲಿ ಶವಗಳು ಪತ್ತೆಯಾಗಿವೆ. ತೆಪ್ಪದ ಸಹಾಯದಿಂದ ಶವಗಳನ್ನು ನಾಲೆಯಿಂದ ಮೇಲೆ ಎತ್ತಲಾಗಿದ್ದು, ವಾರಸು ದಾರರಿಗೆ ಒಪ್ಪಿಸಲಾಗಿದೆ. ಸ್ಥಳದಲ್ಲಿ ಮೃತರ ಬಂಧುಗಳ ರೋದನ ಮುಗಿಲು ಮುಟ್ಟಿತ್ತು.

ADVERTISEMENT

ಮಲ್ಲಿನಾಥಪುರದ ಕರೀಗೌಡ, ಬಸವೇಗೌಡ ಸೇರಿ ನಾಲ್ವರು ನಾರ್ತ್‌ ಬ್ಯಾಂಕ್‌ ಗ್ರಾಮದ ಕಾಳಮ್ಮನ ದೇವಾಲಯಕ್ಕೆ ಬಂದಿದ್ದರು. ದೇವರ ದರ್ಶನಕ್ಕೂ ಮುನ್ನ ಪಕ್ಕದಲ್ಲೇ ಹರಿಯು ತ್ತಿದ್ದ ನಾಲೆಯಲ್ಲಿ ಈಜಲು ಇಳಿದಿ ದ್ದಾರೆ. ವಿಶ್ವೇಶ್ವರಯ್ಯ ನಾಲೆಯಲ್ಲಿ 2,500 ಕ್ಯೂಸೆಕ್‌ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ತುಸು ದೂರ ಕೊಚ್ಚಿ ಹೋಗಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.