ADVERTISEMENT

ಕೋಲಾಟದ ಮೇಷ್ಟ್ರು ಗಂಗಣ್ಣ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 4:59 IST
Last Updated 10 ಜನವರಿ 2018, 4:59 IST
ವಿದ್ಯಾರ್ಥಿನಿಯರಿಗೆ ಕೋಲಾಟ ಕಲಿಸುತ್ತಿರುವ ಗಂಗಣ್ಣ
ವಿದ್ಯಾರ್ಥಿನಿಯರಿಗೆ ಕೋಲಾಟ ಕಲಿಸುತ್ತಿರುವ ಗಂಗಣ್ಣ   

ನಾಗಮಂಗಲ: 12ನೇ ವಯಸ್ಸಿಗೆ ಕೋಲಾಟದ ಕಲೆಯತ್ತ ಆಕರ್ಷಣೆ ಬೆಳೆಸಿಕೊಂಡ ಗಂಗಣ್ಣ ಅನಕ್ಷರಸ್ಥರಾದರೂ, ಕಲೆಯ ಮೂಲಕ ದೇಶದ ಉದ್ದಗಲಕ್ಕೂ ಸಂಚರಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಆದಿಚುಂಚನಗಿರಿ ಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ನಡೆಸುತ್ತಿದ್ದ ಜನಪದ ಕಲಾಮೇಳ ಇವರನ್ನು ಕೋಲಾಟದ ಕಲೆಯತ್ತ ಹೊರಳುವಂತೆ ಮಾಡಿತು. ಅದನ್ನು ಕರಗತ ಮಾಡಿಕೊಂಡ ಇವರು 100ಕ್ಕೂ ಹೆಚ್ಚು ಗ್ರಾಮಗಳ ಯುವಕರಿಗೆ ಕೋಲಾಟ ಕಲಿಸಿದ್ದಾರೆ. ಮೈಸೂರು ದಸರಾ, ಕುಂಬಳಗೋಡು, ಆದಿಚುಂಚನಗಿರಿ ಮತ್ತು ನಂಜನಗೂಡು ಜಾತ್ರೆ, ಉಡುಪಿಯಲ್ಲಿ ನಡೆದ ಜನಪದ ಕಲಾಮೇಳ, ಚಿತ್ರದುರ್ಗ, ಧರ್ಮಸ್ಥಳ, ಊಟಿ, ಬೆಂಗಳೂರು, ತುಮಕೂರು ಮತ್ತು ದೆಹಲಿ ಸೇರಿ ದೇಶದ ಉದ್ದಗಲಕ್ಕೂ ಸಂಚರಿಸಿ ತಮ್ಮ ಕಲೆ ಪ್ರದರ್ಶಿಸಿದ್ದಾರೆ.

200ಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಇವರು ಕೋಲಾಟ ಮೇಳಗಳಲ್ಲಿ ಭಾಗವಹಿಸಿದ್ದಾರೆ. ಇವರ ಕಲೆ ಗುರುತಿಸಿ ಜನಪದ ವಿದ್ವಾಂಸ ಜೀಶಂ ಪರಮಶಿವಯ್ಯ, ಮೈಸೂರು ವಿಶ್ವವಿದ್ಯಾನಿಲಯದ ಜನಪದ ವಿಭಾಗಕ್ಕೆ ಕೊಂಡೊಯ್ದು, ಅಲ್ಲಿ ಕೋಲಾಟದ ಕಲೆಯನ್ನು ಇತರರಿಗೆ ಪಸರಿಸಲು ಅನುವು ಮಾಡಿಕೊಟ್ಟರು ಎಂಬುದನ್ನು ಗಂಗಣ್ಣ ಹೆಮ್ಮೆಯಿಂದ ನೆನೆಯುತ್ತಾರೆ.ಮಲೈಮಹದೇಶ್ವರ, ಚುಂಚನಗಿರಿಯ ಭೈರವ, ಚಾಮುಂಡಿ, ನಂಜುಂಡೇಶ್ವರ, ಯಡಿಯೂರಿನ ಸಿದ್ದಲಿಂಗೇಶ್ವರ ಸೇರಿ ಅನೇಕ ದೇವರ ಮೇಲೆ ಗಂಗಣ್ಣ ಭಾವ ತುಂಬಿ ಹಾಡುತ್ತಾರೆ.

ADVERTISEMENT

ಜನಪದ ಗೀತೆ, ಹಾಸ್ಯ, ಕೊರವಂಜಿ ನೃತ್ಯ, ಕೃಷ್ಣ ರುಕ್ಮಿಣಿ ಪಾತ್ರ, ಜಡೆ ಕೋಲಾಟ, ಬಿಂದಿಗೆ ಹೊತ್ತು ನೃತ್ಯ ಮಾಡುವುದು, ಕರಗದ ಕೋಲಾಟ, ಪೂಜಾ ಕುಣಿತ, ರಂಗ ಕುಣಿತ ಮತ್ತು ತಮಟೆ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಮಂಡ್ಯದ ಪಿಇಎಸ್ ಕಾಲೇಜಿನ ಜನಪದ ವಿಭಾಗ ಮತ್ತು ಬೆಂಗಳೂರಿನ ಹಲವು ಕಾಲೇಜಿನ ವಿದ್ಯಾರ್ಥಿ ಗಳಿಗೆ ಕೋಲಾಟದ ಕಲೆ ಯನ್ನು ಕಲಿಸಿದ್ದನ್ನು ಸಂತಸ ದಿಂದ ಹಂಚಿ ಕೊಳ್ಳುತ್ತಾರೆ. ಇಂದಿನ ಯುವಕರು ಜನಪದ ಕಲೆಯನ್ನು ಮರೆಯುತ್ತಿದ್ದಾರೆ ಎಂದು ವಿಷಾದಿಸುತ್ತಾರೆ.

ಬೆಂಗಳೂರಿನ ಆಕಾಶವಾಣಿ ಮತ್ತು ದೂರದರ್ಶನದಲ್ಲೂ ಪ್ರದರ್ಶನ ನೀಡಿರುವ ಗಂಗಣ್ಣ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಕರ್ನಾಟಕ ಜನಪದ ಮತ್ತು ಯಕ್ಷಗಾನ ಆಕಾಡೆಮಿಯ ಅಧ್ಯಕ್ಷರಾಗಿದ್ದ ಕಾಳೇಗೌಡ ನಾಗವಾರ ಸನ್ಮಾನಿಸಿದ್ದಾರೆ, ವಾಟಾಳ್ ನಾಗರಾಜ್ ನನ್ನ ಕಾರ್ಯಕ್ರಮ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡುವ ಕಲಾವಿದರ ಮಾಸಾಶನ ನೀಡುತ್ತಿಲ್ಲ ಎಂದು ನೋವನ್ನು ವ್ಯಕ್ತಪಡಿಸುತ್ತಾರೆ.

ವೃತ್ತಿಯಲ್ಲಿ ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಇವರು ತನ್ನ ಹುಟ್ಟೂರಾದ ಮಾಯಿಗೋನಹಳ್ಳಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಕೋಲು ಮೇಷ್ಟ್ರು ಗಂಗಣ್ಣ ಎಂದು ಪ್ರೀತಿಯಿಂದ ಕರೆಯುತ್ತಾರೆ.

65ರ ಇಳಿ ವಯಸ್ಸಿನಲ್ಲೂ ಕಲೆಯ ಬಗ್ಗೆ ಆಪಾರ ಆಸಕ್ತಿ ಹೊಂದಿರುವ ಇವರು ಈಗಲೂ ತನ್ನಲ್ಲಿರುವ ಕಲೆಯನ್ನು ಇತರರಿಗೆ ಧಾರೆ ಎರೆಯಲು ಸಿದ್ಧರಿದ್ದಾರೆ. ಗಂಗಣ್ಣ ಅವರ ಜೊತೆ ಮಾತನಾಡಲು ಮೊ; 9449424483 ಸಂಪರ್ಕಿಸಬಹುದು.

ಬಿ. ಸಿ. ಮೋಹನ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.