ADVERTISEMENT

ಮುಖ್ಯಮಂತ್ರಿ ಸ್ವಾಗತಕ್ಕೆ ಕೆ.ಆರ್‌.ಪೇಟೆ ಸಜ್ಜು

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 6:41 IST
Last Updated 12 ಜನವರಿ 2018, 6:41 IST
ಕೆ.ಆರ್‌.ಪೇಟೆ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಅಂಗವಾಗಿ ರಸ್ತೆಯಲ್ಲಿ ಕಟೌಟ್‌ ರಾರಾಜಿಸುತ್ತಿರುವುದು
ಕೆ.ಆರ್‌.ಪೇಟೆ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಅಂಗವಾಗಿ ರಸ್ತೆಯಲ್ಲಿ ಕಟೌಟ್‌ ರಾರಾಜಿಸುತ್ತಿರುವುದು   

ಕೆ.ಆರ್.ಪೇಟೆ: ಪಟ್ಟಣದ ನಾಲ್ವಡಿ ಕೃಷ್ಣರಾಜಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ರಸ್ತೆಗಳು ಕಾಂಗ್ರೆಸ್ ನಾಯಕರ ಕಟೌಟ್‌, ಬ್ಯಾನರ್‌, ಬಂಟಿಂಗ್‌ಗಳಿಂದ ರಾರಾಜಿಸುತ್ತಿವೆ.

ಮುಖ್ಯಮಂತ್ರಿ ಶುಕ್ರವಾರ ಸಂಜೆ ಪಟ್ಟಣಕ್ಕೆ ಬರುತ್ತಿದ್ದು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್ ಮತ್ತು ಕೆ.ಆರ್.ರವೀಂದ್ರಬಾಬು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಟ್ಟಣಕ್ಕೆ 24/7 ಮಾದರಿಯಲ್ಲಿ ನೀರು ಸರಬರಾಜು ಮಾಡುವ 3ನೇ ಹಂತದ ಕುಡಿಯುವ ನೀರು ಯೋಜನೆಗೆ ₹ 28 ಕೋಟಿ ಹಣವು ಮಂಜೂರಾಗಿದ್ದು ಸ್ಥಳೀಯ ಶಾಸಕ ನಾರಾಯಣಗೌಡರ ವಿರೋಧದಿಂದಾಗಿ ಕಾಮಗಾರಿಗೆ ಮುಖ್ಯಮಂತ್ರಿ ಭೂಮಿ ಪೂಜೆ ಮಾಡುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ. ಪಕ್ಷದ ನಾಯಕ ಹಾಗೂ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕಾರ್ಯಕ್ರಮ ನಡೆಯಲಿದೆ.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಕೃಷ್ಣಪ್ಪ, ರಾಜ್ಯಸಭೆ ಸದಸ್ಯ ಕೆ.ರೆಹಮಾನ್ ಖಾನ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಶಾಸಕರಾದ ನರೇಂದ್ರಸ್ವಾಮಿ, ಚಲುವರಾಯಸ್ವಾಮಿ,ರಮೇಶ್ ಬಂಡಿಸಿದ್ದೇಗೌಡ , ಮಾಜಿಸ್ಪೀಕರ್ ಕೃಷ್ಣ ಭಾಗವಹಿಸುವರು.

₹ 28.75 ಕೋಟಿ ಬಿಡುಗಡೆ: ಪುರಸಭಾ ವ್ಯಾಪ್ತಿಯ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ಅವಳಿ ಪಟ್ಟಣಗಳ ಕುಡಿಯುವ ನೀರು ಯೋಜನೆಗಾಗಿ ₹ 28.75 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು ‌

‘ಇದಕ್ಕಾಗಿ ಮುಖ್ಯಮಂತ್ರಿ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದಿಸಲಾಗುವುದು. ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆಗೆ₹ 30 ಕೋಟಿ ಹಾಗೂ ಪುರಸಭೆಯ ನೂತನ ಕಟ್ಟಡ ಮತ್ತು ಹೈಟೆಕ್ ವಾಣಿಜ್ಯ ಸಂಕೀರ್ಣ ನಿರ್ಮಿಸಲು ₹ 5 ಕೋಟಿ ಅನುದಾನ, ಹೈಟೆಕ್ ಕಚೇರಿ ಸೇರಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ₹ 5 ಕೋಟಿಗೂ ಹೆಚ್ಚು ಅನುದಾನ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.