ADVERTISEMENT

‘ನನ್ನ ಸೋಲಿಸುವುದು ಅಸಾಧ್ಯ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 5:39 IST
Last Updated 13 ಜನವರಿ 2018, 5:39 IST
‘ಬಿಜೆಪಿ ಪ್ರಚಾರ ರಥ’ಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು
‘ಬಿಜೆಪಿ ಪ್ರಚಾರ ರಥ’ಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು   

ಮದ್ದೂರು: ಯಾವುದೇ ಅನೈತಿಕ ಮೈತ್ರಿಯಿಂದ ನನ್ನನ್ನು ಸೋಲಿಸುವುದು ಸಾಧ್ಯವಿಲ್ಲ. ಅದು ಕೇವಲ ಕನಸಿನ ಮಾತು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು. ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಲ್ಲಿ ಗುರುವಾರ ಬಿಜೆಪಿ ಪರಿವರ್ತನಾ ಯಾತ್ರೆ ಪ್ರಚಾರ ಸಂಬಂಧ ಕೈಗೊಳ್ಳಲಾದ ‘ಬಿಜೆಪಿ ಪ್ರಚಾರ ರಥ’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಒಂದಾಗಿ ನನ್ನನ್ನು ಮಣಿಸಲು ತೆರೆಮರೆಯಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರು. ಇದೀಗ ಈ ಮೈತ್ರಿ ಬಹಿರಂಗಗೊಂಡಿದೆ. ಈ ಅನೈತಿಕ ಮೈತ್ರಿ ನನ್ನನ್ನು ಮಣಿಸಲು ಸಾಧ್ಯವಿಲ್ಲ. ಚನ್ನಪಟ್ಟಣ ಕ್ಷೇತ್ರದ ಜನರು ಈಗಾಗಲೇ ನನ್ನ ಕೆಲಸವನ್ನು ಗುರುತಿಸಿದ್ದಾರೆ. ಮತ್ತೊಮ್ಮೆ ನನಗೆ ಆರ್ಶೀವಾದ ಮಾಡಲಿದ್ದಾರೆ ಎಂದರು.

ರಾಮನಗರ, ಕನಕಪುರ ಕ್ಷೇತ್ರಗಳಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ರಾಮನಗರದಲ್ಲಿ ಹಾಗೂ ಕನಕಪುರದಲ್ಲಿ ಡಮ್ಮಿ ಅಭ್ಯರ್ಥಿಗಳನ್ನು ನಿಲ್ಲಿಸುವ ತಂತ್ರದ ಮೂಲಕ ಕುಮಾರಸ್ವಾಮಿ ಹಾಗೂ ಶಿವಕುಮಾರ್‌ ಗೆಲ್ಲುವ ತಂತ್ರ ರೂಪಿಸಿದ್ದಾರೆ. ಜನರು ಇವರ ಆಟಗಳನ್ನು ನೋಡುತ್ತಿದ್ದು, ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ADVERTISEMENT

ಜ.19 ಹಾಗೂ 20ರಂದು ಜಿಲ್ಲೆಗೆ ಪರಿವರ್ತನಾ ಯಾತ್ರೆ ಆಗಮಿಸಲಿದೆ. ಇಂದು ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಸರಿ ಸಮಾನವಾಗಿ ತೊಡೆ ತಟ್ಟಿ ನಿಂತಿದೆ. ಜಿಲ್ಲೆಯಲ್ಲಿ ಒಟ್ಟು 4 ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶ ಮಲ್ಲಿಕಾರ್ಜುನ್‌, ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ಜಿ.ಸಿ.ಮಹೇಂದ್ರ, ನಗರ ಅಧ್ಯಕ್ಷ ವೀರಭದ್ರಸ್ವಾಮಿ, ಮುಖಂಡರಾದ ಕೆ.ಎಂ.ರಮೇಶ್, ಕೆಂಪುಬೋರಯ್ಯ, ಜಿ.ಅರವಿಂದ್, ಟೈರ್ ಗಿರೀಶ್, ದಾಕ್ಷಾಯಿಣಿ, ಗುರುಮಲ್ಲೇಶ್, ಮೂಗೂರಯ್ಯ, ಮಲ್ಲೇಶ್‌ ಇದ್ದರು.

* * 

ಅತೃಪ್ತ ನಾಯಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲೇ ಸಾಕಷ್ಟು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲಿದ್ದಾರೆ’
ಸಿ.ಪಿ.ಯೋಗೇಶ್ವರ್‌ ಶಾಸಕ, ಚನ್ನಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.