ADVERTISEMENT

‘ಅಂಗವಿಕಲರ ಬಗ್ಗೆ ಸಕಾರಾತ್ಮಕ ಚಿಂತನೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 6:42 IST
Last Updated 9 ಫೆಬ್ರುವರಿ 2018, 6:42 IST

ಮದ್ದೂರು: ‘ಸಮಾಜದಲ್ಲಿ ಅಂಗವಿಕಲರ ಬಗೆಗೆ ತಾತ್ಸಾರ ಮನೋಭಾವ ತಳೆಯದೇ ಸಕಾರಾತ್ಮಕ ಮನೋಭಾವನೆ ಬೆಳೆಸಿ ಕೊಳ್ಳಬೇಕು’ ತಾಲ್ಲೂಕು ಪುನರ್ವಸತಿ ಕೇಂದ್ರದ ಪುಟ್ಟಸ್ವಾಮಿ ಸಲಹೆ ನೀಡಿದರು.

ಸಮೀಪದ ಸೋಮನಹಳ್ಳಿ ಎಸ್.ಸಿ.ಮಲ್ಲಯ್ಯ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಗುರುವಾರ ನಡೆದ ‘ಅರಿವು ಸಿಂಚನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ರಮಣ ಮಹರ್ಷಿ ಅಂಧರ ಪರಿಷತ್‌ ಸಂಯುಕ್ತವಾಗಿ ಕಾರ್ಯಕ್ರಮ ಏರ್ಪಡಿಸಿದ್ದವು.

‘ಅಂಗವಿಕಲರಿಗೆ ಸರ್ಕಾರದಿಂದ ವೈದ್ಯಕೀಯ ಪ್ರಮಾಣಪತ್ರವಷ್ಟೆ ಅಲ್ಲದೇ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಸೌಲಭ್ಯ, ಉಚಿತ ಬಸ್‌ ಪಾಸ್‌, ವಿವಾಹ ಪ್ರೋತ್ಸಾಹ ಧನ ಸೇರಿ ವಿವಿಧ 22 ಸೌಲಭ್ಯಗಳು ದೊರಕಲಿವೆ. ಅಂಗವಿಕಲರು ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ADVERTISEMENT

ರಮಣ ಮಹರ್ಷಿ ಅಂಧರ ಪರಿಷತ್‌ನ ತಾಲ್ಲೂಕು ಸಂಯೋಜಕ ಮಹಾಂತೇಶ ಹಿರೇಮಠ ಅವರು, ‘ದೈಹಿಕ, ಮಾನಸಿಕ, ದೃಷ್ಟಿ ದೋಷವುಳ್ಳವರು, ಮಾತು ಮತ್ತು ಶ್ರವಣದೋಷವುಳ್ಳವರು, ಬುದ್ಧಿಮಾಂದ್ಯರು, ಕುಷ್ಠರೋಗ ನಿವಾರಿತ ಅಂಗವಿಕಲರು ಮತ್ತು ಬಹುವಿಧ ಅಂಗವಿಕಲರು ಎಂದು ಏಳು ಪ್ರಕಾರದಲ್ಲಿ ಅಂಗವಿಕಲತೆ ಗುರುತಿಸಲಾಗಿದೆ’ ಎಂದರು.

ಇವರುಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಈ ಮೂಲಕ ಅವರಿಗೆ ನೆರವು ನೀಡಬೇಕು. ಹಾಗೂ ಆತ್ಮವಿಶ್ವಾಸ ಮೂಡಿಸಬೇಕು’ ಎಂದು ತಿಳಿಸಿದರು. ಪ್ರಾಂಶುಪಾಲ ಎಸ್.ಆರ್.ಶಿವರಾಮು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ನಂದಿತಾ, ಕಾವ್ಯಶ್ರೀ ಮತ್ತು ಕಲ್ಪಶ್ರೀ ಹಾಗೂ ಇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.