ADVERTISEMENT

7 ಸ್ಥಾನಗಳಿಗೆ ಸೆ. 25ರಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 10:20 IST
Last Updated 4 ಸೆಪ್ಟೆಂಬರ್ 2011, 10:20 IST

ಶ್ರೀರಂಗಪಟ್ಟಣ: ತಾಲ್ಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿ ಸದಸ್ಯರ ರಾಜೀನಾಮೆ ಹಾಗೂ ಅಕಾಲಿಕ ಮರಣದಿಂದ ತೆರವಾಗಿರುವ ಸ್ಥಾನಗಳಿಗೆ ಸೆ. 25ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಅರುಳ್‌ಕುಮಾರ್ ತಿಳಿಸಿದರು.

ಶನಿವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ನಡೆದ ತರಬೇತಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ 5 ಗ್ರಾ.ಪಂ.ಗಳ 7 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸೆ.5 ರಿಂದ 12ರ ವರೆಗೆ ಆಯಾ ಗ್ರಾ.ಪಂ. ಕಚೇರಿಗಳಲ್ಲಿ ನಾಮಪತ್ರ ಸಲ್ಲಿಸಬೇಕು. ಸೆ.13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸೆ.15 ಉಮೇದುವಾರಿಕೆ ವಾಪಸು ಪಡೆಯಲು ಕಡೇ ದಿನವಾಗಿರುತ್ತದೆ. ಸೆ. 25ರಂದು ಮತದಾನ ಹಾಗೂ ಸೆ. 29ರಂದು ತಾಲ್ಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ವಿವರಿಸಿದರು.

ಚುನಾವಣೆ ನಡೆಯುವ ಕ್ಷೇತ್ರಗಳು: ತಾಲ್ಲೂಕಿನ ಪಿ.ಹೊಸಹಳ್ಳಿ ಗ್ರಾ.ಪಂ.- 2ನೇ ಬ್ಲಾಕ್‌ನ ಎರಡು ಸ್ಥಾನ, ಮಹದೇವಪುರ ಗ್ರಾ.ಪಂ- ಬಿದರಹಳ್ಳಿ ಒಂದನೇ ಬ್ಲಾಕ್ ಒಂದು ಸ್ಥಾನ, ತಡಗವಾಡಿ ಗ್ರಾ.ಪಂ- ಒಂದನೇ ಬ್ಲಾಕ್‌ನ ಒಂದು ಸ್ಥಾನ, ಅರಕೆರೆ ಗ್ರಾ.ಪಂ.- 4 ಮತ್ತು 7ನೇ ಬ್ಲಾಕ್‌ನ ಎರಡು ಹಾಗೂ ಕಿರಂಗೂರು ಗ್ರಾ.ಪಂ.ನ 2ನೇ ಬ್ಲಾಕ್‌ನ (ಬಿ.ಆರ್.ಕೊಪ್ಪಲು) ಒಂದು ಸ್ಥಾನಗಳಿಗೆ ಸೆ. 25ರಂದು ಚುನಾವಣೆ ನಿಗದಿಯಾಗಿದೆ. ಪಿ.ಹೊಸಹಳ್ಳಿಯಲ್ಲಿ ಬಿಸಿಎಂ `ಎ~ ಮತ್ತು ಪರಿಷ್ಟ ಜಾತಿ (ಮಹಿಳೆ), ಮಹದೇವಪುರ- ಸಾಮಾನ್ಯ, ತಡಗವಾಡಿ- ಬಿಸಿಎಂ `ಬಿ~, ಅರಕೆರೆ ಸಾಮನ್ಯ ಮಹಿಳೆ ಹಾಗೂ ಸಾಮಾನ್ಯ, ಕಿರಂಗೂರು ಗ್ರಾ.ಪಂ.ನ ಒಂದು ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದೆ ಎಂದು ಹೇಳಿದರು.

ಚುನಾವಣೆ ಘೋಷಣೆಯಾಗಿರುವ ಗ್ರಾ.ಪಂ.ಗಳಲ್ಲಿ ಸೆ. 2ರಿಂದ ಸೆ.30ರ ವರೆಗೆ ನೀತಿಸಂಹಿತೆ ಜಾರಿಯಲ್ಲಿದ್ದು ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಪ್ರತಿ ಮತಗಟ್ಟೆಗೆ ತಲಾ ಒಬ್ಬೊಬ್ಬರು ಅಧ್ಯಕ್ಷಾಧಿಕಾರಿ, ಸಹಾಯಕ ಅಧಿಕಾರಿ ಸೇರಿ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಉಪ ತಹಶೀಲ್ದಾರ್ ರೇಣುಕುಮಾರ್ ಹಾಗೂ ನಿಯೋಜಿತ ಸಿಬ್ಬಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.