ADVERTISEMENT

ಮಂಡ್ಯ | ಸಂತ್ರಸ್ತೆಯರಿಂದ ಅರ್ಜಿಗಳ ಮಹಾಪೂರ

ಮಂಡ್ಯದಲ್ಲಿ ಪಲಾಯನ ಮಾಡಿದ ಏಜೆಂಟರು: ‘ಬಡ್ಸ್‌’ ಕಾಯ್ದೆಯಡಿ ಪರಿಹಾರದ ನಿರೀಕ್ಷೆ

ಸಿದ್ದು ಆರ್.ಜಿ.ಹಳ್ಳಿ
Published 13 ಜುಲೈ 2024, 4:43 IST
Last Updated 13 ಜುಲೈ 2024, 4:43 IST
<div class="paragraphs"><p>ಖಾಸಗಿ ಹಣಕಾಸು ಕಂಪನಿಗಳಿಗೆ ಹಣ ಕಟ್ಟಿ ಮೋಸ ಹೋದ ಸಂತ್ರಸ್ತೆಯರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಅರ್ಜಿ ಸಲ್ಲಿಸಲು ಬಂದಿದ್ದ ವೇಳೆ ಬಾಂಡ್‌ ಪೇಪರ್‌ ಮತ್ತು ದಾಖಲೆ ಪ್ರದರ್ಶಿಸಿದರು </p></div><div class="paragraphs"><p></p></div>

ಖಾಸಗಿ ಹಣಕಾಸು ಕಂಪನಿಗಳಿಗೆ ಹಣ ಕಟ್ಟಿ ಮೋಸ ಹೋದ ಸಂತ್ರಸ್ತೆಯರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಅರ್ಜಿ ಸಲ್ಲಿಸಲು ಬಂದಿದ್ದ ವೇಳೆ ಬಾಂಡ್‌ ಪೇಪರ್‌ ಮತ್ತು ದಾಖಲೆ ಪ್ರದರ್ಶಿಸಿದರು

   

ಪ್ರಜಾವಾಣಿ ಚಿತ್ರ

ADVERTISEMENT

ಮಂಡ್ಯ: ‘ಹೊಟ್ಟೆ–ಬಟ್ಟೆ ಕಟ್ಟಿ ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ದೇವ್ರು ಕಣ್ಣು ಬಿಟ್ರೆ ಪುಟ್ಟ ಮನೆ ಕಟ್ಟಿಕೊಳ್ಳಬೇಕು ಅಂತ ನಮ್ಹತ್ರ ಇದ್ದ ಹಣವನ್ನೆಲ್ಲ ಖಾಸಗಿ ಕಂಪನಿಗೆ ಕಟ್ಟಿದ್ದೆವು. ದೊಡ್ಡ ಮೊತ್ತದ ಬಡ್ಡಿ ಸಿಗುತ್ತದೆ ಅಂತ ನಿರೀಕ್ಷಿಸಿದ್ದ ನಮಗೆ ದುಡಿದ ಹಣವೂ ಕೈತಪ್ಪಿ ಹೋಯಿತು’ ಎಂದು ಮೇಲುಕೋಟೆ ಹೋಬಳಿಯ ಮಹಿಳೆಯರು ಕಣ್ಣೀರು ಹಾಕಿದರು. 

ರಾಜ್ಯದ ಪ್ರತಿಷ್ಠಿತ ಖಾಸಗಿ ಹಣಕಾಸು ಸಂಸ್ಥೆ ಮತ್ತು ಕಂಪನಿಗಳಿಗೆ ‘ಅನಿಯಂತ್ರಿತ ಠೇವಣಿ’ (ಅನ್‌ರೆಗ್ಯು ಲೇಟೆಡ್‌ ಡೆಪಾಸಿಟ್‌) ಯೋಜನೆಗಳಡಿ ಹಣ ಹೂಡಿ, ವಂಚನೆಗೊಳಗಾದ ನೂರಾರು ಮಹಿಳೆಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ‘ದೂರು ಸ್ವೀಕಾರ ಕೇಂದ್ರ’ಕ್ಕೆ ಅರ್ಜಿ ಸಲ್ಲಿಸಲು ಶುಕ್ರವಾರ ಬಂದಿದ್ದರು. 

ಇದು ಜಿಲ್ಲೆಯ ಸಮಸ್ಯೆ ಮಾತ್ರವಲ್ಲ, ರಾಜ್ಯದಾದ್ಯಂತ ವಿವಿಧ ಖಾಸಗಿ ಕಂಪನಿಗಳ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಸಂತ್ರಸ್ತ ಮಹಿಳೆ ಯರ ಕಣ್ಣೀರ ಕಥನ. ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ದೂರು ಅರ್ಜಿಗಳ ಪ್ರವಾಹವೇ ಹರಿದು ಬರುತ್ತಿದೆ.  

2,500 ದೂರು ಸಲ್ಲಿಕೆ: ‘ಜಿಲ್ಲಾಧಿಕಾರಿ ಕಚೇರಿಯ ದೂರು ಸ್ವೀಕಾರ ಕೇಂದ್ರಕ್ಕೆ ಕಳೆದ 3 ತಿಂಗಳಿಂದ 547 ದೂರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ನಾಲ್ಕೈದು ದಿನಗಳಿಂದ 2ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಖಾಸಗಿ ಕಂಪನಿಗಳು ನೀಡಿದ ಬಾಂಡ್‌, ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಪಾಸ್‌ಬುಕ್‌ ಜೆರಾಕ್ಸ್‌ ಪ್ರತಿಗಳನ್ನು ಮಹಿಳೆಯರು ಸಲ್ಲಿಸಿದ್ದಾರೆ. ಇವುಗಳನ್ನು ಪರಿಶೀಲಿಸಿ, ಮುಂದಿನ ಕ್ರಮಕ್ಕೆ ಪೊಲೀಸ್‌ ಇಲಾಖೆಗೆ ಹಸ್ತಾಂತರಿಸುತ್ತೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬಾಂಡ್‌ಗಳನ್ನೇ ಕಸಿದ ಏಜೆಂಟರು: ‘ನೀವು ಹೂಡಿಕೆ ಮಾಡಿದ ಹಣಕ್ಕೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ಆಸೆ ತೋರಿಸಿದ ಕಂಪನಿಗಳ ಏಜೆಂಟರು ಹಳ್ಳಿ ಮಹಿಳೆಯರಿಂದ ಸಾವಿರಾರು ರೂಪಾಯಿ ಹಣವನ್ನು ಕಂತಿನ ರೂಪ ದಲ್ಲಿ ಕಟ್ಟಿಸಿಕೊಂಡಿದ್ದರು. ಒಂದೂವರೆ ವರ್ಷದ ನಂತರ ಯೋಜನೆ ತಾತ್ಕಾಲಿಕ ವಾಗಿ ಸ್ಥಗಿತಗೊಂಡಿದೆ. ನೀವು ಕಟ್ಟಿದ ಹಣಕ್ಕೆ ಬಡ್ಡಿ ಸೇರಿಸಿ ಸ್ವಲ್ಪ ತಿಂಗಳ ನಂತರ ಕೊಡುತ್ತೇವೆ’ ಎಂದು ನಮ್ಮನ್ನು ನಂಬಿಸಿದರು. ಆನಂತರ ಕೊಟ್ಟ ಬಾಂಡ್‌ಗಳನ್ನೇ ಕೆಲವರಿಂದ ಕಸಿದುಕೊಂಡು ಹೋದರು. ಈಗ ನಮ್ಮ ಬಳಿ ಹಣ ಕಟ್ಟಿದ್ದಕ್ಕೆ ದಾಖಲೆಯೇ ಇಲ್ಲದಂತಾಗಿದೆ’ ಎಂದು ಪಾಂಡವಪುರ ತಾಲ್ಲೂಕಿನ ವಿವಿಧ ಗ್ರಾಮಗಳ ಮಹಿಳೆಯರು ಅಳಲು ತೋಡಿಕೊಂಡರು. 

‘ಪ್ರತಿ ತಿಂಗಳು ₹500ರಂತೆ 3 ವರ್ಷ ಹಣ ಕಟ್ಟಿದರೆ ₹18 ಸಾವಿರವಾಗುತ್ತದೆ. ಅದಕ್ಕೆ ₹7 ಸಾವಿರ ಬಡ್ಡಿ ಸೇರಿಸಿ ಒಟ್ಟು ₹25ಸಾವಿರ ಹಣ ನೀಡುತ್ತೇವೆ ಎಂದು ಕಂಪನಿ ಏಜೆಂಟರು ಆಮಿಷ ಒಡ್ಡಿದರು. ಅದನ್ನು ನಂಬಿ ನಾವು ಹಣ ಕಟ್ಟಿ, ಅಸಲು, ಬಡ್ಡಿ ಎರಡನ್ನೂ ಕಳೆದುಕೊಂಡಿದ್ದೇವೆ. ಬಡ್ಸ್‌ ಕಾಯ್ದೆಯಡಿ ಜಿಲ್ಲಾಧಿಕಾರಿಯವರು ಪರಿಹಾರ ಕೊಡಿಸುತ್ತಾರೆ ಎಂದು ಅರ್ಜಿ ಸಲ್ಲಿಸಿದ್ದೇವೆ’ ಎಂದು ತುಮಕೂರು ಜಿಲ್ಲೆಯ ಕುಣಿಗಲ್‌ ಮಹಿಳೆಯರು ಸಮಸ್ಯೆ ತೋಡಿಕೊಂಡರು.

‘ಆಸ್ತಿ ಮುಟ್ಟುಗೋಲು ಹಾಕಿ, ಪರಿಹಾರ ನೀಡಿ’

ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ–2019 (ಬಡ್ಸ್‌ ಆ್ಯಕ್ಟ್‌) ಮತ್ತು ಪಿಐಡಿ ಕಾಯ್ದೆಯಡಿ ಸಕ್ಷಮ ಅಧಿಕಾರಿಗಳು ವಿಶೇಷ ಕೌಂಟರ್‌ ತೆರೆದು‌, ಹಣಕಾಸು ಸಂಸ್ಥೆ, ಕಂಪನಿ ಮತ್ತು ಸೊಸೈಟಿಗಳಿಂದ ವಂಚನೆಗೆ ಒಳಗಾದ ಸಂತ್ರಸ್ತರಿಂದ ಅರ್ಜಿಗಳನ್ನು ಸ್ವೀಕರಿಸಿ, ನಿಗದಿತ 180 ದಿನಗಳಲ್ಲಿ ಹಣ ಮರು ಪಾವತಿಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಚೇರಿಯ ಸಹಾಯಕ ಆಯುಕ್ತರು 6 ತಿಂಗಳ ಹಿಂದೆಯೇ ಆದೇಶಿಸಿದ್ದಾರೆ. 

‘ಬಡ್ಸ್‌’ ಕಾಯ್ದೆಯು ವಂಚನೆ ಮಾಡಿದ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಅಧಿಕಾರ ನೀಡಿದೆ. ಇದರಡಿ ಅರ್ಜಿಗಳನ್ನು ಸ್ವೀಕರಿಸಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕರಣ ದಾಖಲಿಸಿಕೊಂಡು ಪರಿಹಾರ ಕೊಡಿಸುತ್ತಾರೆ ಎಂಬ ನಿರೀಕ್ಷೆಯಿಂದ ಏಳೆಂಟು ವರ್ಷಗಳ ಹಿಂದೆ ಹಣ ಕಳೆದುಕೊಂಡವರು ಅರ್ಜಿ ಸಲ್ಲಿಸಲು ಬಂದಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಸಾರ್ವಜನಿಕರಿಂದ ಬಂದ ದೂರು ಅರ್ಜಿಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕಳುಹಿಸಿ ಕೊಡುತ್ತೇವೆ. ಅವರು ವಿಚಾರಣೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುತ್ತಾರ.
ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.