ADVERTISEMENT

ಮೇಲುಕೋಟೆಯಲ್ಲಿ ಅದ್ದೂರಿ ಅಂಗಮಣಿ ಉತ್ಸವ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:41 IST
Last Updated 17 ಜನವರಿ 2026, 6:41 IST
ಮೇಲುಕೋಟೆಯ ಸಜ್ಜೆಹಟ್ಟಿ ಮತ್ತು ಕರಗಂ ಅವರ ಮನೆಯಲ್ಲಿ ಶ್ರೀದೇವಿ, ಭೂದೇವಿ ಅಮ್ಮನವರಿಗೆ ಹಣ್ಣುಗಳನ್ನು ತಟ್ಟೆಯಲ್ಲಿ ಜೋಡಿಸಿ, ಮಡಿಲು ಶಾಸ್ತ್ರ ನೆರವೇರಿಸಲಾಯಿತು 
ಮೇಲುಕೋಟೆಯ ಸಜ್ಜೆಹಟ್ಟಿ ಮತ್ತು ಕರಗಂ ಅವರ ಮನೆಯಲ್ಲಿ ಶ್ರೀದೇವಿ, ಭೂದೇವಿ ಅಮ್ಮನವರಿಗೆ ಹಣ್ಣುಗಳನ್ನು ತಟ್ಟೆಯಲ್ಲಿ ಜೋಡಿಸಿ, ಮಡಿಲು ಶಾಸ್ತ್ರ ನೆರವೇರಿಸಲಾಯಿತು    

ಮೇಲುಕೋಟೆ: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಅಂಗವಾಗಿ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಅಂಗಮಣಿ ಉತ್ಸವ ವೈಭವದಿಂದ ಶುಕ್ರವಾರ ನೆರವೇರಿತು.

ಸ್ವಾಮಿಯ ಅರಸಿಯರಾದ ಶ್ರೀದೇವಿ, ಭೂದೇವಿಗೆ ತವರು ಮನೆಯಾದ ಸಜ್ಜೆಹಟ್ಟಿ ಮಂಟಪದಲ್ಲಿ ಅಂಗಮಣಿ ಉತ್ಸವ ಪ್ರಯುಕ್ತ ಮಡಿಲು ತುಂಬುವ ಸಂಪ್ರದಾಯ ಪ್ರತಿ ವರ್ಷದಂತೆ ಈ ಬಾರಿಯೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಮೇಲುಕೋಟೆಯ ಸ್ಥಾನೀಕ ಕರಗಂ ನಾರಾಯಣ ಅಯ್ಯಂಗಾರ್ ಮತ್ತು‌ ಸ್ಥಾನೀಕರಾದ ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್‌
ಅವರ ಮನೆಗಳಲ್ಲಿ ಏಕಕಾಲದಲ್ಲಿ ಶುಕ್ರವಾರ ಸಂಜೆ ದೇಶದ ಪ್ರಖ್ಯಾತ ಹಣ್ಣುಗಳನ್ನು ತಂದು ನೂರಾರು ತಟ್ಟೆಗಳಲ್ಲಿ ಜೋಡಿಸಿ ಸಂಜೆ 6 ಗಂಟೆಯ ನಂತರ ದೇವಿಯರಿಗೆ ಅರ್ಪಿಸಲಾಯಿತು. ಹಣ್ಣುಗಳ ತಟ್ಟಿಯನ್ನು ವೀಕ್ಷಿಸಲು ರಾತ್ರಿ 9 ಗಂಟೆಯವರೆಗೂ ಅವಕಾಶ ಮಾಡಿಕೊಡಲಾಯಿತು.

ADVERTISEMENT

ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಭೂದೇವಿಯರಿಗೆ ಶ್ರೀಸೂಕ್ತ ಪಾರಾಯಣದೊಂದಿಗೆ ಅಭಿಷೇಕ ನೆರವೇರಿಸಲಾಯಿತು. ನಂತರ ದೇವಿಯರ ಉತ್ಸವ ನೆರವೇರಿಸಿ ಪಂಚ ಕಲ್ಯಾಣಿ ಮಾತೆಗೆ ಪೂಜೆ ನೆರವೇರಿಸಲಾಯಿತು. 

ದರ್ಶನಕ್ಕೆ ಅವಕಾಶ: ಚೆಲುವನಾರಾಯಣ ಸ್ವಾಮಿಯ ಅರಸಿಯರಾದ ಶ್ರೀದೇವಿ-ಭೂದೇವಿ ಅಮ್ಮನವರಿಗೆ ಅತ್ಯಮೂಲ್ಯ ಹಣ್ಣುಗಳಿಂದ ಮಡಿಲು ತುಂಬಿ ಮಹಾಮಂಗಳಾರತಿ ನೆರವೇರಿಸಲಾಯಿತು. ಸಂಜೆ 5 ಗಂಟೆಯಿಂದಲೇ ತಂಡೋಪತಂಡವಾಗಿ ಬರುತ್ತಿದ್ದ ನೂರಾರು ಸಂಖ್ಯೆಯ ಭಕ್ತರು ಹೂವು, ಹಣ್ಣುಗಳ ತಟ್ಟೆ ವೀಕ್ಷಣೆ ಮಾಡಿದರು. ದೇವಾಲಯ ಅರ್ಚಕರು, ಸ್ಥಾನೀಕರು, ವಿದ್ವಾಂಸರು ಹಾಗೂ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಶೀಲಾ ಪಾಲ್ಗೊಂಡಿದರು.