ADVERTISEMENT

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ| ಗಾಯಗೊಂಡಿದ್ದವರ ರಕ್ಷಣೆಗೆ ಹೋದ ಮೂವರ ದುರ್ಮರಣ

ಮದ್ದೂರು ತಾಲ್ಲೂಕಿನ ಮಣಿಗೆರೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:00 IST
Last Updated 13 ಜೂನ್ 2019, 20:00 IST
ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು ಹಾಗೂ ರಕ್ಷಿಸಲು ಹೋಗಿ ಮೃತಪಟ್ಟವರು
ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು ಹಾಗೂ ರಕ್ಷಿಸಲು ಹೋಗಿ ಮೃತಪಟ್ಟವರು   

ಭಾರತೀನಗರ: ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಮಣಿಗೆರೆ ಗ್ರಾಮದ ಬಳಿ ಬುಧವಾರ ರಾತ್ರಿ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದವರನ್ನು ರಕ್ಷಿಸಲು ಹೋದ ಮೂವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

ಬಿದರಹೊಸಹಳ್ಳಿ ಗ್ರಾಮದ ಪ್ರಸನ್ನ (45) ಮತ್ತು ಪ್ರದೀಪ್ ಕುಮಾರ್‌ (ಕರಿಪುಟ್ಟ) (25) ಹಾಗೂ ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿ ಗ್ರಾಮದ ದೇವರಾಜು (30) ಮೃತರು. ಪ್ರಸನ್ನ ಚಾಂಷುಗರ್ ಕಾರ್ಖಾನೆ ನೌಕರ.

ನಿತ್ಯಾನಂದ, ಅಭಿಷೇಕ್, ಶಶಿಕುಮಾರ್ ಎಂಬುವವರು ಕಾರಿನಲ್ಲಿ ಮಳವಳ್ಳಿ ಕಡೆಯಿಂದ ಭಾರತೀನಗರದ ಕಡೆಗೆ ಬರುತ್ತಿದ್ದರು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದರಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿವೆ. ಈ ವೇಳೆ ಕಾರಿನ ಒಳಗಿದ್ದವರು ಗಂಭೀರವಾಗಿ ಗಾಯಗೊಂಡು ಚೀರಾಡುತ್ತಿದ್ದರು.

ADVERTISEMENT

ಇದೇ ಮಾರ್ಗದಲ್ಲಿ ಬಿದರಹೊಸಹಳ್ಳಿ ಗ್ರಾಮದಿಂದ ಬೈಕ್‌ನಲ್ಲಿ ಬಂದ ಪ್ರದೀಪ್‌ಕುಮಾರ್, ತಮ್ಮ ದೊಡ್ಡಪ್ಪ ಪ್ರಸನ್ನ ಹಾಗೂಸಮೀಪದಲ್ಲಿದ್ದ ದೇವರಾಜು, ಮಧು, ನಂದೀಶ್ ಹಾಗೂ ಜೀವನ್‌ಕುಮಾರ್ ಅವರು ಪಲ್ಟಿಯಾಗಿದ್ದ ಕಾರನ್ನು ಎತ್ತಲು ಮುಂದಾಗಿದ್ದಾರೆ.

ಕಾರನ್ನು ಒಂದು ಬದಿಗೆ ಉರುಳಿಸಿ ಆ ಭಾಗದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಮತ್ತೊಂದು ಕಡೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲು ಇನ್ನೊಂದು ಕಡೆಗೆ ಕಾರನ್ನು ಉರುಳಿಸಲು ಮುಂದಾಗಿದ್ದಾರೆ. ಈ ವೇಳೆ, ತಂತಿಯ ಸ್ಪರ್ಶದಿಂದ ವಿದ್ಯುತ್‌ ಪ್ರವಹಿಸಿದೆ. ಹೀಗಾಗಿ, ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳೀಯರು ಸೆಸ್ಕ್ ಸಿಬ್ಬಂದಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತ ಗೊಳಿಸಿದ್ದಾರೆ.

ಮಧು, ನಂದೀಶ್, ಜೀವನ್‌ ಕುಮಾರ್ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ನಿತ್ಯಾನಂದ, ಅಭಿಷೇಕ್, ಶಶಿ ಕುಮಾರ್ ಅವರೂ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ಕುಟುಂಬಗಳಿಗೆ ಸೆಸ್ಕ್ ವತಿಯಿಂದ ತಲಾ ₹2 ಲಕ್ಷ ಪರಿಹಾರ ನೀಡಿದ್ದು, ಅದರ ಚೆಕ್‌ ಅನ್ನು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಿತರಿಸಿದರು.

ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿ ಗ್ರಾಮದ ದೇವರಾಜು ಅವರ ಕುಟುಂಬಕ್ಕೆ ಶಾಸಕ ಡಾ.ಕೆ.ಅನ್ನದಾನಿ ಪರಿಹಾರದ ಚೆಕ್‌ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರ ನೀಡಿದ ಕೆ.ನಿಖಿಲ್‌, ಡಿ.ಸಿ.ತಮ್ಮಣ್ಣ
ಜೆಡಿಎಸ್‌ ಮುಖಂಡ ಕೆ.ನಿಖಿಲ್‌ ಹಾಗೂ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ ₹50 ಸಾವಿರ ಪರಿಹಾರ ನೀಡಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ಹಣವನ್ನು ಕುಟುಂಬಗಳ ಸದಸ್ಯರಿಗೆ ತಲುಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.