ADVERTISEMENT

ಗಾಯಳುವಿಗೆ ₹ 53 ಲಕ್ಷ ಪರಿಹಾರ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 13:38 IST
Last Updated 12 ಫೆಬ್ರುವರಿ 2020, 13:38 IST

ಮಂಡ್ಯ: ಅಪಘಾತವೊಂದರಲ್ಲಿ ಮೂಳೆ ಮುರಿತಕ್ಕೊಳಗಾಗಿದ್ದ ಗಾಯಾಳುವೊಬ್ಬರು ಮೋಟಾರು ವಾಹನ ಅಪಘಾತ ಪರಿಹಾರ ಮಂಡಳಿಯಿಂದ ₹ 53 ಲಕ್ಷ ಪರಿಹಾರ ಪಡೆದಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗಾಯಾಳುವೊಬ್ಬರು ದೊಡ್ಡ ಮೊತ್ತದ ಪರಿಹಾರ ಪಡೆದಿದ್ದಾರೆ.

ಅರ್ಕೇಶ್ವರ ನಗರದ ನಿವಾಸಿ ಎನ್‌.ಪುಟ್ಟಸ್ವಾಮಿ ಪರಿಹಾರ ಪಡೆದ ಗಾಯಾಳು. 2016 ಜೂ.6ರಂದು ಕಾರು ಡಿಕ್ಕಿಯಾಗಿ ಅವರ ಬಲಗಾಲಿನ ಮಂಡಿಚಿಪ್ಪು ಸ್ಥಾನಪಲ್ಲಟ, ಎಡಗಾಲಿನ ತೊಡೆ ಮುರಿದಿತ್ತು. ಚಿಕಿತ್ಸೆಯ ನಂತರ ತನಗಾದ ನಷ್ಟಕ್ಕೆ ಪರಿಹಾರ ನೀಡುವಂತೆ ಐಸಿಐಸಿಐ ಲ್ಯಾಂಬರ್ಡ್‌ ವಿಮಾ ಕಂಪನಿ ವಿರುದ್ಧ 1ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಯಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಪರಿಹಾರವಾಗಿ ₹ 1.07 ಕೋಟಿ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಗಾಯಾಳುವಿಗೆ ₹ 37.88 ಲಕ್ಷ ಪರಿಹಾರ ನೀಡಬೇಕು. ಜೊತೆಗೆ 2017ರಿಂದ ಇಲ್ಲಿಯವರೆಗೂ ಪರಿಹಾರ ಮೊತ್ತಕ್ಕೆ ಬಡ್ಡಿ ನೀಡಬೇಕು ಎಂದು ಈಚೆಗೆ ಆದೇಶಿದರು. ಇದಕ್ಕೂ ಮೊದಲು ಗಾಯಾಳು ವಿಮಾ ಕಂಪನಿಯಿಂದ ₹ 8 ಲಕ್ಷ ಪರಿಹಾರ ಪಡೆದಿದ್ದರು. ವಾರ್ಷಿಕ ಶೇ 8ರಂತೆ ಬಡ್ಡಿ ಮೊತ್ತ ₹ 7.5 ಸೇರಿ ಒಟ್ಟಾರೆ ಗಾಯಾಳು ₹ 53.37 ಲಕ್ಷ ಪರಿಹಾರ ಪಡೆದಂತಾಗಿದೆ.

ADVERTISEMENT

‘ಜಿಲ್ಲೆಯ ಇತಿಹಾಸದಲ್ಲಿ ಗಾಯಾಳು ಅತೀ ಹೆಚ್ಚು ಪರಿಹಾರ ಪಡೆದಿದ್ದಾರೆ. ಗಾಯಾಳು ಅನುಭವಿಸಿರುವ ಯಾತನೆಯನ್ನು ಕೋರ್ಟ್‌ ಗಮನಕ್ಕೆ ತರಲಾಯಿತು. ಹೀಗಾಗಿ ಪ್ರಕರಣದಲ್ಲಿ ಯಶಸ್ವಿಯಾಗಲು ಸಾಧ್ಯವಾಗಿದೆ. ಇದು ಜನರಿಗೆ ಒಂದು ಮಾದರಿ ಪ್ರಕರಣವಾಗಿದೆ’ ಎಂದು ಅರ್ಜಿದಾರರ ಪರ ವಕೀಲ ಎನ್‌.ಚನ್ನಬಸಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.