ಮಂಡ್ಯ: ಖಾಸಗಿ ಕಾಲೇಜಿಗೆ ಸೇರಿಸಲಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದ ಯುವತಿ ಭಾನುವಾರ ನಸುಕಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನಿಂದ ನೊಂದ ತಂದೆ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಮನಕಲಕುವ ಘಟನೆ ಮಳವಳ್ಳಿ ತಾಲ್ಲೂಕು, ತಳಗವಾದಿ ಗ್ರಾಮದಲ್ಲಿ ನಡೆದಿದೆ. ಟಿ.ಆರ್.ಬಾಂಧವ್ಯ (17), ತಂದೆ ಕೆ.ರಾಜು (65) ಮೃತಪಟ್ಟ ತಂದೆ–ಮಗಳು. ತಂದೆಯ ದಿನವೇ ಈ ಘಟನೆ ನಡೆದಿದ್ದು ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ರೈತರಾಗಿದ್ದ ಕೆ.ರಾಜು ಅವರಿಗೆ ಐವರು ಮಕ್ಕಳು, ನಾಲ್ವರು ಪುತ್ರಿಯರು, ಒಬ್ಬ ಪುತ್ರ. ಕಿರಿಯ ಪುತ್ರಿ ಬಾಂಧವ್ಯ ತಂದೆಯ ಪ್ರೀತಿಯ ಪುತ್ರಿಯಾಗಿದ್ದರು. ಪ್ರತಿಭಾವಂತೆಯಾಗಿದ್ದ ಈಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 93 ಅಂಕ ಗಳಿಸಿದ್ದರು. ಮೈಸೂರು ಜಿಲ್ಲೆ, ಬನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮುಗಿಸಿದ್ದರು, ಈಗ ದ್ವಿತೀಯ ಪಿಯುಸಿಗೆ ದಾಖಲಾಗಬೇಕಾಗಿತ್ತು.
ಕೆ.ರಾಜು ಎಲ್ಲಾ ಮಕ್ಕಳನ್ನು ಖಾಸಗಿ ಶಾಲೆ, ಕಾಲೇಜುಗಳಲ್ಲೇ ಓದಿಸಿದ್ದರು. ಓದಿನಲ್ಲಿ ಮುಂದಿದ್ದ ಬಾಂಧವ್ಯ ದ್ವಿತೀಯ ಪಿಯುಸಿಗೆ ಉತ್ತಮ ಖಾಸಗಿ ಕಾಲೇಜಿಗೆ ಸೇರಿಸುವಂತೆ ತಂದೆಯನ್ನು ಕೇಳಿಕೊಂಡಿದ್ದರು. ಆಕೆ ವೈದ್ಯೆಯಾಗುವ ಕನಸು ಹೊಂದಿದ್ದರು. ಆದರೆ, ಇದೊಂದು ವರ್ಷ ಸರ್ಕಾರಿ ಕಾಲೇಜಿನಲ್ಲೇ ಓದು ಮುಗಿಸುವಂತೆ ತಂದೆ ತಿಳಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಬಾಂಧವ್ಯ ಭಾನುವಾರ ನಸುಕಿನಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗಳ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುವಾಗ ಕೆ.ರಾಜು ಅಸ್ವಸ್ಥರಾದರು. ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದರು. ಮಳವಳ್ಳಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.