ಶ್ರೀರಂಗಪಟ್ಟಣ: ಕೊಲೆಗೀಡಾದ ವ್ಯಕ್ತಿ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ನಂಬಿಸಿದ್ದ ಪ್ರಕರಣವನ್ನು ಭೇದಿಸಿರುವ ಪಟ್ಟಣ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ಶಶಾಂಕ್‌ಗೌಡ ಎಂಬಾತನನ್ನು ಕೊಲೆ ಮಾಡಿದ್ದ ಇದೇ ತಾಲ್ಲೂಕಿನ ಮಿಣಜಿ ಬೋರನಕೊಪ್ಪಲು ಗ್ರಾಮದ ಶಿವಕುಮಾರ್ ಅಲಿಯಾಸ್ ಕ್ವಾಟ್ರು ಶಿವ, ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪಾಲಹಳ್ಳಿ ಗ್ರಾಮದ ಹರ್ಷ ಮತ್ತು ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ಅಭಿಷೇಕ್ ಅವರನ್ನು ಬಂಧಿಸಲಾಗಿದೆ. ಪಾಂಡವಪುರ ತಾಲ್ಲೂಕು ಬ್ಯಾಟೆತಿಮ್ಮನಕೊಪ್ಪಲು ಗ್ರಾಮದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಶಶಾಂಕ್‌ಗೌಡ ಮತ್ತು ಆರೋಪಿಗಳು ನ.18ರಂದು ತಾಲ್ಲೂಕಿನ ಮಿಣಜಿಬೋರನಕೊಪ್ಪಲು ಗ್ರಾಮದ ಖಾಲಿ ಜಾಗವೊಂದರಲ್ಲಿ ತಡರಾತ್ರಿ ವರೆಗೆ ಪಾರ್ಟಿ ಮಾಡಿದ್ದರು. ಶಿವಕುಮಾರ್ ಮತ್ತು ಶಶಾಂಕ್‌ಗೌಡ ಅವರ ನಡುವೆ ಮಾತಿಗೆ ಮಾತು ಬೆಳೆದು ಶಿವಕುಮಾರ್ ಶಶಾಂಕ್‌ಗೌಡನನ್ನು ಕೆಳಕ್ಕೆ ತಳ್ಳಿದ್ದ. ತಲೆಗೆ ಕಲ್ಲು ಬಡಿದು ಅಸ್ವಸ್ಥಗೊಂಡಿದ್ದ ಶಶಾಂಕ್‌ಗೌಡ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದ.
ಶಿವಕುಮಾರನನ್ನು ಕೊಲೆ ಪ್ರಕರಣದಿಂದ ಪಾರು ಮಾಡುವ ಉದ್ದೇಶದಿಂದ, ಶಶಾಂಕ್‌ಗೌಡ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಜತೆಗಿದ್ದವರು ಅವರ ತಾಯಿಗೆ ತಿಳಿಸಿದ್ದರು. ಪೊಲೀಸ್ ಠಾಣೆಯಲ್ಲಿ ಆ ಪ್ರಕಾರವೇ ದೂರು ದಾಖಲಾಗಿತ್ತು. ಪ್ರಕರಣದ ಬಗ್ಗೆ ಅನುಮಾನ ಬಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ತನಿಖೆಗೆಗಾಗಿ ಸಿಪಿಐ ಬಿ.ಜಿ. ಕುಮಾರ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಆರೋಪಿಗಳನ್ನು ನ. 21ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಆರೋಪಿಗಳನ್ನು ಶನಿವಾರ ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಬಿ.ಜಿ. ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.