ADVERTISEMENT

ಮಾನಸಿಕ, ದೈಹಿಕ ಸದೃಢಕ್ಕೆ ಕ್ರೀಡೆ ಸಹಕಾರಿ

ಮುಖ್ಯಮಂತ್ರಿ ಯಡಿಯೂರಪ್ಪ ಅಭಿಮತ, 23ನೇ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 9:10 IST
Last Updated 13 ಡಿಸೆಂಬರ್ 2019, 9:10 IST
ಆದಿಚುಂಚನಗಿರಿಯಲ್ಲಿ ನಡೆದ ಕ್ರೀಡಾಕೂಟವನ್ನು ಯಡಿಯೂರಪ್ಪ, ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು
ಆದಿಚುಂಚನಗಿರಿಯಲ್ಲಿ ನಡೆದ ಕ್ರೀಡಾಕೂಟವನ್ನು ಯಡಿಯೂರಪ್ಪ, ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು   

ನಾಗಮಂಗಲ: ವಿದ್ಯಾರ್ಥಿಗಳು ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ವಾಗಿ ಬೆಳವಣಿಗೆ ಆಗಬೇಕಾದರೆ ವಿದ್ಯೆಯ ಜೊತೆಗೆ ಕ್ರೀಡೆಯೂ ಮುಖ್ಯ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ವತಿಯಿಂದ ಗುರುವಾರ ಆಯೋಜಿಸಿದ್ದ 23ನೇ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಗೆ ಕ್ರೀಡೆಗಳ ಮೂಲಕ ಶಿಕ್ಷಣ ನೀಡಿದಾಗ ಅದು ಅತ್ಯಂತ ಪರಿಣಾಮಕಾರಿ ಆಗುತ್ತದೆ. ಕ್ರೀಡಾ ಮನೋಭಾವ ಬೆಳೆಸಲು ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಕ್ರೀಡಾಕೂಟಗಳು ಅತ್ಯಗತ್ಯ. ಕಂಪ್ಯೂಟರ್ ಯುಗದಲ್ಲಿ ಮಕ್ಕಳು ಹೊರಾಂಗಣ ಆಟಗಳಲ್ಲಿ ತೊಡಗುವ ಮೂಲಕ ಆರೋಗ್ಯ ವನ್ನು ಕಾಪಾಡಿಕೊಳ್ಳಬೇಕು. ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಬೆಳೆಸಿಕೊಳ್ಳ ಬೇಕು ಎಂದರು.

ADVERTISEMENT

ಆರೋಗ್ಯಯುತ, ಸ್ವಾರ್ಥರಹಿತ ಮನೋಭಾವ ಬೆಳೆಸುವ ಉದ್ದೇಶದಿಂದ ಆದಿಚುಂಚನಗಿರಿ ಮಠವು ಕ್ರೀಡಾಕೂಟ ಆಯೋಜಿಸುತ್ತಿರುವುದು ಶ್ಲಾಘನೀಯ ವಾದದ್ದು ಎಂದು ಹೇಳಿದರು.

ಕಾಲಭೈರವೇಶ್ವರನಿಗೆ ಪೂಜೆ: ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೇವಾಲಯಕ್ಕೆ ಭೇಟಿ ನೀಡಿ ಹುಣ್ಣಿಮೆ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.

ಆಶೀವರ್ಚನ ನೀಡಿದ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ‌, ‘ಕ್ರೀಡೆಗಳು ಸ್ಪರ್ಧಾ ಮನೋಭಾವ ಮೂಡಿಸುತ್ತವೆ. ಸೋಲು– ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಮೈಗೂಡಿಸಿ ಕೊಳ್ಳಬಹುದು. ಯಾವುದೇ ಸನ್ನಿವೇಶ ಯನ್ನು ಎದುರಿಸುವ ಛಲ ಕಲಿಸುತ್ತವೆ. ಹೀಗಾಗಿ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನೂ ನಿಭಾಯಿಸಲು ಕ್ರೀಡೆಗಳು ಸಹಕಾರಿ’ ಎಂದು ಅವರು ತಿಳಿಸಿದರು.

ಕ್ರೀಡಾಕೂಟದಲ್ಲಿ 15 ಜಿಲ್ಲೆಗಳ 3,000 ಕ್ರೀಡಾಪಟುಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಗಣ್ಯರಿಗೆ ಧ್ವಜ ವಂದನೆ, ಗೌರವವಂದನೆ ಸಲ್ಲಿಸಿದರು. ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಗಣ್ಯರು ತೆರೆದ ವಾಹನದಲ್ಲಿ‌ ಕ್ರೀಡಾಂಗಣದಲ್ಲಿ ಸಂಚರಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಕ್ರೀಡಾ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಆದಿಚುಂಚನ ಗಿರಿ ಶಿಕ್ಷಣ ಟ್ರಸ್ಟ್‌ ಕಾರ್ಯದರ್ಶಿ ಪುರುಷೋತ್ತಮಾನಂದ ಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ, ಶಾಸಕ ಸುರೇಶ್ ಗೌಡ, ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ, ತುರುವೇಕೆರೆ ಶಾಸಕ ಜಯರಾಮ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಇದ್ದರು.

₹4.13 ಕೋಟಿ ಪ್ರೋತ್ಸಾಹಧನ

ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ರಾಜ್ಯ ಸರ್ಕಾರ ಅಗತ್ಯ ನೆರವು ನೀಡುತ್ತಿದೆ. ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ 36 ತರಬೇತುದಾರರು, 12 ಫಿಟ್ನೆಸ್ ಪ್ರಶಿಕ್ಷಕರು, 28 ಕಿರಿಯ ತರಬೇತುದಾರನ್ನು ನೇಮಿಸಲಾಗಿದೆ‌. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಎಸ್‌ಸಿ, ಎಸ್‌ಟಿ ಕ್ರೀಡಾಪಟುಗಳಿಗೆ ₹4.13 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.