ನಾಗಮಂಗಲ: ತಾಲ್ಲೂಕಿನ ಐತಿಹಾಸಿಕ ಪುರಾಣ ಪ್ರಸಿದ್ಧ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಾ.7ರಿಂದ 15ರವರೆಗೆ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, 9 ದಿನಗಳವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಮತ್ತು ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರಾ ಮಹೋತ್ಸವದ ಅಂಗವಾಗಿ 7ರಂದು ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಪೂಜೆ ನೆರವೇರಿಸಿ ಧರ್ಮಧ್ವಜ ಸ್ಥಾಪನೆ ಕಾರ್ಯಕ್ರಮ ನೆರವೇರಿಸುವ ಮೂಲಕ ಬೆಳಿಗ್ಗೆ 6.30ಕ್ಕೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮೊದಲ ದಿವಸ ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಾಂದಿ ಪೂಜೆ ನಡೆಯಲಿದ್ದು, ಬೆಳಿಗ್ಗೆ 10ರ ನಂತರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮಗಳು ಜರುಗಲಿವೆ. 8ರಂದು ಶನಿವಾರ ಸಂಜೆ 6ಕ್ಕೆ ಸರ್ವಾಲಂಕೃತ, ಚಂದ್ರಮೌಳೀಶ್ವರಸ್ವಾಮಿ ಉತ್ಸವ ಆಯೋಜಿಸಲಾಗಿದೆ. 9ರಂದು ಸಂಜೆ 6ಕ್ಕೆ ಮಲ್ಲೇಶ್ವರಸ್ವಾಮಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
10ರಂದು ಬೆಳಿಗ್ಗೆ 9.30ಕ್ಕೆ ಸರಳ ಸಾಮೂಹಿಕ ವಿವಾಹ ಮತ್ತು ಹಿರಿಯ ದಂಪತಿಗೆ ಸನ್ಮಾನ ಸಮಾರಂಭವನ್ನು ನಿಗದಿ ಮಾಡಲಾಗಿದೆ. ಸಂಜೆ 6ರಿಂದ ಸಿದ್ದೇಶ್ವರಸ್ವಾಮಿ ಉತ್ಸವವು ಸಂಭ್ರಮದಿಂದ ಜರುಗಲಿದೆ. ಅಲ್ಲದೇ 11ರಂದು ಬೆಳಿಗ್ಗೆ 7.30ಕ್ಕೆ ಕಾಲಭೈರವೇಶ್ವರಸ್ವಾಮಿಗೆ ಸುವರ್ಣ ಕವಚ ಅಲಂಕಾರ ಮತ್ತು ಗಂಗಾಧರೇಶ್ವರಸ್ವಾಮಿಗೆ ರಜತ ನಾಗಾಭರಣ ಅಲಂಕಾರದೊಂದಿಗೆ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಜೆ 6ಕ್ಕೆ ಕಾಲಭೈರವೇಶ್ವರಸ್ವಾಮಿಯ ಹೂವಿನ ಪಾಲಕ್ಕಿ ಉತ್ಸವ, ನಿರ್ಮಲನಂದನಾಥ ಸ್ವಾಮೀಜಿ ಅವರ ಮುತ್ತಿನ ಪಾಲಕ್ಕಿ ಉತ್ಸವಗಳು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಲಿವೆ.
ಮಾ.12ರಂದು ಸಂಜೆ 6ಕ್ಕೆ ಜ್ವಾಲಾಪೀಠಾರೋಹಣ ಮತ್ತು ಸಿದ್ಧಸಿಂಹಾಸನ ಪೂಜೆ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 8ಕ್ಕೆ ಚಂದ್ರಮಂಡಲೋತ್ಸವವು ಭಕ್ತರ ಸಮ್ಮುಖದಲ್ಲಿ ಜರುಗಲಿದೆ. 13ರಂದು ಸಂಜೆ 6.30ಕ್ಕೆ ಸರ್ವಧರ್ಮ ಸಮ್ಮೇಳನ, ರಾತ್ರಿ 8ಕ್ಕೆ ಕಾಲಭೈರವೇಶ್ವರಸ್ವಾಮಿ ತಿರುಗಣಿ ಉತ್ಸವ ಮತ್ತು ರಾತ್ರಿ 9ಕ್ಕೆ ಕಾಲಭೈರವೇಶ್ವರಸ್ವಾಮಿ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮಗಳು ಸೇರಿದಂತೆ 9.30ಕ್ಕೆ ಪೌರಾಣಿಕ ನಾಟಕಗಳನ್ನು ಆಯೋಜಿಸಲಾಗಿದೆ.
14ರಂದು ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವ
ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ 9 ದಿನಗಳು ಜರಗುವ ಜಾತ್ರೆಯ ಕೇಂದ್ರ ಬಿಂದುವಾಗಿರುವ ಕಾರ್ಯಕ್ರಮ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವವು 14ರಂದು ಮುಂಜಾನೆ 4ರಂದು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಅಲ್ಲದೇ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಅಡ್ಡಪಾಲಕ್ಕಿ ಉತ್ಸವವು ನೆರವೇರಲಿದೆ. ನಂತರ ಸಂಜೆ 6ಗಂಟೆಗೆ ನೂರಾರು ಗ್ರಾಮ ದೇವರುಗಳನ್ನು ಮೆರವಣಿಗೆಯ ಮೂಲಕ ಗಿರಿಪ್ರದಕ್ಷಿಣೆ ನಡೆಯಲಿದೆ. ಅಲ್ಲದೇ ಸರ್ವಾಲಂಕೃತ ಸೋಮೇಶ್ವರಸ್ವಾಮಿ ಉತ್ಸವ ಜರುಗಲಿದೆ.
ಮಾ.15ರಂದು ಬೆಳಿಗ್ಗೆ 9ಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಅವರು ಧರ್ಮ ಧ್ವಜಾರೋಹಣ ಮತ್ತು ಬೆಳಿಗ್ಗೆ 9.30ಕ್ಕೆ ಬಿಂದು ಸರೋವರದಲ್ಲಿ ಅವಭೃತ ಸ್ನಾನ ಮತ್ತು ಮಹಾಭಿಷೇಕ ಕಾರ್ಯಕ್ರಮಗಳನ್ನು ನೆರವೇರಿಸುವ ಜೊತೆಗೆ ಬೆಳಿಗ್ಗೆ 10.30ರ ಸಭಾ ಕಾರ್ಯಕ್ರಮದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಜೊತೆಗೆ ಜಾತ್ರೆಗೆ ಬರುವ ಭಕ್ತರು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.