ADVERTISEMENT

ಮಂಡ್ಯ | ಒಂದೇ ಬೆಳೆಗೆ ಜೋತು ಬೀಳಬೇಡಿ: ಜಿಪಂ ಸಿಇಒ ನಂದಿನಿ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 14:40 IST
Last Updated 22 ಮೇ 2025, 14:40 IST
ಮಂಡ್ಯ ಜಿಲ್ಲಾ ಪಂಚಾಯಿತಿ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಗತಿಪರ ರೈತರಿಗೆ ಸಮಗ್ರ ಕೃಷಿ ಪದ್ಧತಿ, ಹನಿ ನೀರಾವರಿ ಅಳವಡಿಕೆ ಹಾಗೂ ವಿವಿಧ ಬೆಳೆಗಳ ಕೊಯ್ಲೋತ್ತರ ಕುರಿತ ವಿಚಾರ ಸಂಕಿರಣವನ್ನು ಸಿಇಒ ಕೆ.ಆರ್‌.ನಂದಿನಿ ಉದ್ಘಾಟಿಸಿದರು 
ಮಂಡ್ಯ ಜಿಲ್ಲಾ ಪಂಚಾಯಿತಿ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಗತಿಪರ ರೈತರಿಗೆ ಸಮಗ್ರ ಕೃಷಿ ಪದ್ಧತಿ, ಹನಿ ನೀರಾವರಿ ಅಳವಡಿಕೆ ಹಾಗೂ ವಿವಿಧ ಬೆಳೆಗಳ ಕೊಯ್ಲೋತ್ತರ ಕುರಿತ ವಿಚಾರ ಸಂಕಿರಣವನ್ನು ಸಿಇಒ ಕೆ.ಆರ್‌.ನಂದಿನಿ ಉದ್ಘಾಟಿಸಿದರು    

ಮಂಡ್ಯ: ‘ಜಿಲ್ಲೆಯ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಭತ್ತ, ಕಬ್ಬು ಬೆಳೆಗಳ ಜೊತೆಗೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ವ್ಯವಸಾಯದಲ್ಲಿ ಹೊಸ ಪದ್ಧತಿ ಅಳವಡಿಸಿಕೊಳ್ಳಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು ರೈತರನ್ನು ಉದ್ದೇಶಿಸಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆಯಿಂದ ಹಾಗೂ 2025-26ನೇ ಸಾಲಿನ ಜಿಲ್ಲಾ ಪಂಚಾಯಿತಿ ಯೋಜನೆಯಡಿ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಗತಿಪರ ರೈತರಿಗೆ ಸಮಗ್ರ ಕೃಷಿ ಪದ್ಧತಿ, ಹನಿ ನೀರಾವರಿ ಅಳವಡಿಕೆ ಹಾಗೂ ವಿವಿಧ ಬೆಳೆಗಳ ಕೊಯ್ಲೋತ್ತರ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಣ್ಣಿನ ಫಲವತ್ತತೆಯಲ್ಲಿ, ನೀರಿನ ಸೌಲಭ್ಯದಲ್ಲಿ ಜಿಲ್ಲೆಯು ಶ್ರೀಮಂತಿಕೆಯನ್ನು ಹೊಂದಿದೆ. ಅದರ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬ ರೈತರು ಒಂದೇ ರೀತಿಯ ಬೆಳೆಗಳನ್ನು ಬೆಳೆಯದೆ ಇತರೆ ಲಾಭದಾಯಕ ಬೆಳೆಗಳನ್ನು ಸಹ ಬೆಳೆಯಿರಿ ಎಂದು ಕಿವಿಮಾತು ಹೇಳಿದರು.

ADVERTISEMENT

ರೈತರು ಉದ್ದಿಮೆದಾರರಾಗಬೇಕು, ಆರ್ಥಿಕವಾಗಿ ಸದೃಢರಾಗಬೇಕು ಎಂಬುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದ್ದು, ಯಾವ ಮಣ್ಣಿಗೆ ಯಾವ ಬೆಳೆ ಬೆಳೆಯಬೇಕು, ಯಾವ ವರ್ತಮಾನದಲ್ಲಿ ಯಾವ ಬೆಳೆ ಉತ್ತಮ, ಯಾವುದು ಲಾಭದಾಯಕ ಎಂಬುದನ್ನು ಅರಿತು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಿ ಎಂದರು.

ಬೆಂಗಳೂರು ಜಿಲ್ಲಾ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಮಂಜುನಾಥ್ ಗೌಡ ಮಾತನಾಡಿ, ‘ವ್ಯವಸಾಯದಲ್ಲಿ ಒಂದೇ ಹಾದಿಯಲ್ಲಿ ಸಾಗಿದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ, ಸಮಗ್ರ ಕೃಷಿ ಪದ್ಧತಿಯೊಂದಿಗೆ ವ್ಯವಸಾಯ ಮಾಡಲು ಒಮ್ಮೆ ಪ್ರಯತ್ನಿಸಿ’ ಎಂದು ರೈತರಿಗೆ ಹೇಳಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹಿತ್ತಲಮನಿ ಮಾತನಾಡಿ, ‘ರೈತರು ದೇಶದ ಹಸಿವು ನೀಗಿಸುವವರು, ಅವರನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜು, ರೇಷ್ಮೆ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ವಿಜ್ಞಾನಿಗಳಾದ ಮಮತಾ, ಆಂಜನಪ್ಪ ಮತ್ತು ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು. 

‘ಮೀನುಗಾರಿಕೆ ತರಬೇತಿ ನೀಡಿ’

ಮೀನು ಆರೋಗ್ಯಕರ ಆಹಾರವಾಗಿದೆ. ಆದರೆ ಜಿಲ್ಲೆಯಲ್ಲಿ ಮೀನುಗಾರಿಕೆ ಹಾಗೂ ಮೀನು ಮಾರಾಟ ಕಡಿಮೆಯಿದೆ. ರೈತ ಮಹಿಳೆಯರಿಗೆ ಸ್ವ-ಸಹಾಯ ಸಂಘಗಳ ಮೂಲಕ ಮೀನುಗಾರಿಕೆ ಕುರಿತು ತರಬೇತಿಗಳನ್ನು ನೀಡಿ ಹಾಗೂ ಮೀನು ಮಾರಾಟ ಮಳಿಗೆಗಳನ್ನು ತೆರೆಯಲು ಲೈಸನ್ಸ್ ಸೇರಿತಂತೆ ಇತರೆ ಸಹಾಯಗಳನ್ನು ದೊರಕಿಸಿಕೊಡಲು ಮುಂದಾಗಿ ಎಂದು ಸಿಇಒ ಕೆ.ಆರ್‌.ನಂದಿನಿ ಅವರು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಸಮಗ್ರ ಕೃಷಿ ಎಂದರೆ ವ್ಯವಸಾಯದ ಒಟ್ಟಿಗೆ ಮೀನುಗಾರಿಕೆ ತೋಟಗಾರಿಕೆ ಹಾಗೂ ಪಶು ಸಂಗೋಪನೆ ಎಲ್ಲವನ್ನು ಒಳಗೊಂಡಿರುವುದು ಆಗಿದೆ. ಆಗಾಗಿ ಕೋಳಿ ಸಾಕಾಣಿಕೆ ಹಸು ಸಾಕಾಣಿಕೆ ಹಾಗೂ ಕುರಿ ಸಾಕಾಣಿಕೆ ಪದ್ಧತಿಗಳನ್ನು ಅಳವಡಿಸಿಕೊಂಡು ಲಾಭದಾಯಕವಾಗಿ ಮುಂದುವರಿಯಿರಿ ಎಂದು ರೈತ ಭಾಂದವರಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.