ADVERTISEMENT

ಮಂಡ್ಯ: ಸೆ. 11ರಂದು ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 4:47 IST
Last Updated 9 ಸೆಪ್ಟೆಂಬರ್ 2025, 4:47 IST
ಪ್ರೊ.ಜಯಪ್ರಕಾಶಗೌಡ
ಪ್ರೊ.ಜಯಪ್ರಕಾಶಗೌಡ   

ಮಂಡ್ಯ: ಕರ್ನಾಟಕ ಸಂಘ, ಪಟೇಲ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಯೋಧ ಆರ್.ಲೋಕೇಶ್ ಪಟೇಲ್ ಜ್ಞಾಪಕಾರ್ಥ ವಿದ್ಯಾರ್ಥಿ ಪುರಸ್ಕಾರ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.11ರಂದು ಸಂಜೆ 5ಕ್ಕೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಹೇಳಿದರು.

‘ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಐದನೇ ವರ್ಷದ ಕಾರ್ಯಕ್ರಮ ನಡೆಯಲಿದ್ದು, ದೊಡ್ಡಗರುಡನಹಳ್ಳಿ ಗ್ರಾಮದ ಲೋಕೇಶ್ ಪಟೇಲ್ 2020ರಲ್ಲಿ ನಿಧನರಾಗಿದ್ದು, ಅವರ ಸ್ಮರಣಾರ್ಥ ಜೆ.ರಾಜಶೇಖರಯ್ಯ ಮತ್ತು ನಾಗಮ್ಮ ದಂಪತಿ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ವಿಶ್ವಮಾನವ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರಗತಿಪರ ರೈತ ಬಿ.ಸಿ.ಪ್ರಸನ್ನ ಅವರಿಗೆ ನಿಂಗಮ್ಮ ಪಟೇಲರ ಜೋಗೀಗೌಡ ಕೃಷಿ ಪ್ರಶಸ್ತಿಯನ್ನು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಪ್ರದಾನ ಮಾಡುವ‌ರು. ಪ್ರಶಸ್ತಿ ₹25,000 ನಗದು ಪುರಸ್ಕಾರ ಒಳಗೊಂಡಿದೆ. 5ನೇ ಹಣಕಾಸು ಆಯೋಗದ ಸದಸ್ಯ ಕೆ.ಯಾಲಕ್ಕಿಗೌಡ ವಿದ್ಯಾರ್ಥಿ ಪುರಸ್ಕಾರ ನೀಡುವರು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.

ADVERTISEMENT

ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾದ ಸುಮತಿ ಎಂ., ಸುಮಿತ್ರಾ ಡಿ.ಸಿ, ಸುಶ್ಮಿತಾ ಜಿ.ಕೆ., ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿಜಯ ಬಸವರಾಜ ಕನ್ನೂರ, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೌಜನ್ಯಾ ಜಾಧವ್, ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಶ್ರೀಕಾಂತ್, ಮೈಸೂರು ಮಹಾಜನ ಕಾಲೇಜಿನ ಮಾನಸಾ ಅವರಿಗೆ ವಿದ್ಯಾರ್ಥಿ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.

ದೊಡ್ಡಗರುಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶ್ರೀಶೈಲ ಡಿ.ಎಸ್., ಆಶಾ ಡಿ.ಕೆ. ಅವರಿಗೆ ₹ 5,000 ಮತ್ತು ಪುರಸ್ಕಾರ ನೀಡಲಾಗುವುದು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಐದು ಶಾಲೆಗಳ ಇಬ್ಬರು ವಿದ್ಯಾರ್ಥಿಗಳಂತೆ ಒಟ್ಟು ಹತ್ತು ವಿದ್ಯಾರ್ಥಿಗಳಿಗೆ ₹ 2,000 ಬಹುಮಾನ ನೀಡಲಾಗುವುದು ಎಂದರು.

ಟ್ರಸ್ಟ್ ಉಪಾಧ್ಯಕ್ಷೆ ಕಲಾವತಿ, ಕಾರ್ಯದರ್ಶಿ ಜೆ.ರಾಜಶೇಖರಯ್ಯ, ಧರ್ಮದರ್ಶಿ ಬಿ.ಎಸ್. ಸಿದ್ದರಾಜು, ಸಂಘದ ತಗ್ಗಹಳ್ಳಿ ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.