ADVERTISEMENT

ದೇಶ ಎಷ್ಟೇ ಮುಂದುವರಿದರೂ ರೈತ ಅತ್ಯಾವಶ್ಯ: ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಪ್ರಾಂತ ರೈತ ಸಮ್ಮೇಳನ ಸಮಾರೋಪ: ಅಭಿಮತ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 14:14 IST
Last Updated 17 ನವೆಂಬರ್ 2021, 14:14 IST
ಭಾರತೀಯ ಕಿಸಾನ್‌ ಸಂಘದ ವತಿಯಿಂದ ಬುಧವಾರ ಮುಕ್ತಾಯಗೊಂಡ ಪ್ರಾಂತ ರೈತ ಸಮ್ಮೇಳನದಲ್ಲಿ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಾತನಾಡಿದರು
ಭಾರತೀಯ ಕಿಸಾನ್‌ ಸಂಘದ ವತಿಯಿಂದ ಬುಧವಾರ ಮುಕ್ತಾಯಗೊಂಡ ಪ್ರಾಂತ ರೈತ ಸಮ್ಮೇಳನದಲ್ಲಿ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಾತನಾಡಿದರು   

ಮಂಡ್ಯ: ‘ದೇಶದಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರೈತರು ಬಹುಮುಖ್ಯ ಪಾತ್ರ ವಹಿಸುತ್ತಾರೆ’ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಭಾರತೀಯ ಕಿಸಾನ್‌ ಸಂಘ–ಕರ್ನಾಟಕ ಪ್ರದೇಶದ ವತಿಯಿಂದ ಬುಧವಾರ ಮುಕ್ತಾಯಗೊಂಡ ಪ್ರಾಂತ ರೈತ ಸಮ್ಮೇಳನ–2021ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಳೆ ವರವೂ ಹೌದು ಶಾಪವೂ ಕೂಡ ಹೌದು. ಎಲ್ಲವೂ ಮಿತಿಯಲ್ಲಿದ್ದರೆ ಸಂಪದ್ಭರಿತವಾಗಿರುತ್ತದೆ. ಮಳೆ ಇರದಿದ್ದರೆ ಅನಾವೃಷ್ಟಿ ಅಥವಾ ಮಳೆ ಇದ್ದರೆ ಅತೀವೃಷ್ಟಿ ಎಂಬಂತೆ ಪ್ರಸ್ತುತದ ಸನ್ನಿವೇಶವಾಗಿದೆ. ಏಕೆಂದರೆ ಮಳೆಯು ಎಡೆಬಿಡದೆ ಸುರಿಯುತ್ತಿದೆ. ರೈತರ ಬೆಳೆದ ಬೆಳೆಗಳಿಗೆ ಹಾನಿಯಾಗುವ ಲಕ್ಷಣಗಳು ಹೆಚ್ಚಿವೆ’ ಎಂದರು.

ADVERTISEMENT

‘ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರು ಕೂಡ ರೈತರು ಬಹುಮುಖ್ಯ ಪಾತ್ರ ವಹಿಸುತ್ತಾರೆ, ಉತ್ತುವುದು ಬಿತ್ತುವುದನ್ನು ಬಿಟ್ಟರೆ ರೈತ ದಾರಿದ್ರ್ಯ ಉಂಟಾಗುತ್ತದೆ. ದೇಶವು ಶೇ.75 ರಷ್ಟು ಭಾಗ ರೈತರನ್ನೇ ಅವಲಂಬಿಸಿದೆ. ಯಾವ ದೇಶ ರೈತರನ್ನು ಸಂರಕ್ಷಣೆ ಮಾಡುತ್ತದೋ ಆ ದೇಶ ಅಭಿವೃದ್ಧಿ ದೇಶ ಆಗುತ್ತದೆ. ರೈತರ ಸಮಸ್ಯೆ ಪರಿಹಾರಕ್ಕೆ ಹೆಚ್ಚಾಗಿ ಚಿಂತನಾ ಸಭೆಗಳು ನಡೆಯಬೇಕು. ಆ ಮೂಲಕ ಅವರ ನೆರವಿಗೆ ಬರಬೇಕು’ ಎಂದು ಸಲಹೆ ನೀಡಿದರು.

‘ಫಲವತ್ತಾದ ಕೃಷಿ ಭೂಮಿಯನ್ನು ಕಾರ್ಖಾನೆಗಳಿಗೆ ಪರಿವರ್ತನೆ ಮಾಡಲಾಗುತ್ತಿರುವುದು ತಪ್ಪು, ಫಲ ಕೊಡುವ ಭೂಮಿಯನ್ನು ಕೃಷಿಗೆಂದೇ ಮೀಸಲಿಟ್ಟು ಕಾರ್ಖಾನೆಗೆ ಇತರೆ ಸ್ಥಳವನ್ನು ಅಥವಾ ಬೆಳೆ ಬೆಳೆಯಲು ಯೋಗ್ಯವಲ್ಲದ ಭೂ ಭಾಗವನ್ನು ಕಾರ್ಖಾನೆಯ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು’ ಎಂದರು.

ಭಾರತೀಯ ಕಿಸಾನ್‌ ಸಂಘದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದೋಣೂರು ರಾಮು ಮಾತನಾಡಿ ‘ಸಂಘಟನೆಗಳು ರೈತರ ಪರವಾಗಿ ನಿಲ್ಲಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘದ ಮುಂಚೂಣಿಯಲ್ಲಿರುವವರು ಸದಾ ಉತ್ಸುಕರಾಗಿರಬೇಕು. ಆಗ ಮಾತ್ರ ಆ ಸಂಘಟನೆಗಳಿಗೆ ಜೀವ ಬರುತ್ತದೆ’ ಎಂದರು.

ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ರಾಜೇಂದ್ರ ರಾಮಾಪುರ, ಅಖಿಲಭಾರತ ಅಧ್ಯಕ್ಷ ಇಂದಾವರ ಐ.ಎನ್‌.ಬಸವೇಗೌಡ, ಕಾರ್ಯಕಾರಿಣಿ ಸದಸ್ಯೆ ವೀಣಾ ಸತೀಶ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್‌ ಕಾಸರಘಟ್ಟ, ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಸಂಚಾಲಕ ಹಾಡ್ಯ ರಮೇಶ್, ಪ್ರಮುಖ್‌ ವೆಂಕಟೇಶ್‌ ಪಣಕನಹಳ್ಳಿ ಭಾಗವಹಿಸಿದ್ದರು.

ಮೈಷುಗರ್‌: ಖಾಸಗಿ ಗುತ್ತಿಗೆ ಅವಶ್ಯ

ಮೈಷುಗರ್ ಕಾರ್ಖಾನೆಯನ್ನು ದಕ್ಷ, ಪ್ರಾಮಾಣಿಕ ಖಾಸಗಿ ಕಂಪನಿಯವರಿಗೆ ಗುತ್ತಿಗೆ ಆಧಾರದಲ್ಲಿ ವಹಿಸಿಕೊಡಬೇಕು ಎಂಬುದು ಸೇರಿ ಹಲವು ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.

ಜೊತೆಗೆ ‘ಕುಲಾಂತರಿ ತಳಿ’(ಜಿಎಂಓ) ಅನುಷ್ಠಾನ ಹುನ್ನಾರ ನಡೆದಿದ್ದು ‘ಸೀಮಿತ ಕ್ಷೇತ್ರ’ ಪ್ರಯೋಗ ವಿರೋಧಿಸುವುದು ಮುಖ್ಯವಾಗಬೇಕು. ಇದಕ್ಕೆ ಅನುಮತಿ ನೀಡಬಾರದು. ದೇಸೀ ವೈವಿಧ್ಯಗಳ ನಿರ್ಮೂಲನೆ ಹುನ್ನಾರ ಇರಲಿದ್ದು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲ ಇದರ ಪ್ರಯೋಗ ಆಗಬಾರದು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದು, ಜೊತೆಗೆ ಕೆಆರ್‌ಎಸ್‌ ಅಣೆಕಟ್ಟೆ ಸಂರಕ್ಷಣೆಗೆ ಕ್ರಮ ವಹಿಸಬೇಕು. ಈ ಬಾರಿ ಉತ್ತಮ ಮಳೆ ಆಗಿದ್ದು, ಭತ್ತ, ರಾಗಿ, ತೊಗರಿ, ಜೋಳ, ಮೆಕ್ಕೆ ಜೋಳ, ಹೆಸರು ಸೇರಿದಂತೆ ಇತ್ಯಾದಿ ಬೆಳೆಗಳ ಲಾಭ ದಲ್ಲಾಳಿಗಳ ಪಾಲಾಗದಂತೆ ತಡೆಯಲು ಸರ್ಕಾರವೇ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ನಿರ್ಣಯ ಕೈಗೊಳ್ಳಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.