ADVERTISEMENT

ಆಲೆಮನೆ ತ್ಯಾಜ್ಯ: ಮಾಲೀಕರಿಗೆ ನೋಟಿಸ್‌

ಪ್ಲಾಸ್ಟಿಕ್‌, ರಬ್ಬರ್‌ ದಹನದಿಂದ ಶಾಲಾ ಮಕ್ಕಳಿಗೆ ಅನಾರೋಗ್ಯ, ಬಾಯಿಗೆ ಬಟ್ಟೆಕಟ್ಟಿಕೊಳ್ಳುವ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 5:29 IST
Last Updated 2 ಅಕ್ಟೋಬರ್ 2019, 5:29 IST
ಮಂಡ್ಯ ತಾಲ್ಲೂಕಿನ ಜೀಗುಂಡಿಪಟ್ಟಣ ಗ್ರಾಮದ ಆಲೆಮನೆಯಲ್ಲಿ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ಸಂಗ್ರಹಿಸಲಾಗಿತ್ತು (ಎಡಚಿತ್ರ). ಪ್ರಜಾವಾಣಿಯಲ್ಲಿ ವರದಿ ಪ್ರಕಟಗೊಂಡ ನಂತರ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ತೆರವುಗೊಳಿಸಲಾಗಿದೆ
ಮಂಡ್ಯ ತಾಲ್ಲೂಕಿನ ಜೀಗುಂಡಿಪಟ್ಟಣ ಗ್ರಾಮದ ಆಲೆಮನೆಯಲ್ಲಿ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ಸಂಗ್ರಹಿಸಲಾಗಿತ್ತು (ಎಡಚಿತ್ರ). ಪ್ರಜಾವಾಣಿಯಲ್ಲಿ ವರದಿ ಪ್ರಕಟಗೊಂಡ ನಂತರ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ತೆರವುಗೊಳಿಸಲಾಗಿದೆ   

ಮಂಡ್ಯ: ತಾಲ್ಲೂಕಿನ ಜೀಗುಂಡಿಪಟ್ಟಣ ಗ್ರಾಮದ ಆಲೆಮನೆಯಲ್ಲಿ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ದಹಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳು ಆಲೆಮನೆಗೆ ಮಂಗಳವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಆಲೆಮನೆ ಪಕ್ಕದಲ್ಲೇ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ ಆಲೆಮನೆಯಿಂದ ತೊಂದರೆಯಾಗಿದ್ದು, ಶಿಕ್ಷಕರು ಬಾಯಿಗೆ ಬಟ್ಟೆಕಟ್ಟಿಕೊಂಡು ಪಾಠ ಮಾಡುತ್ತಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಯಲ್ಲಿ ‘ಬಾಯಿಗೆ ಬಟ್ಟೆಕಟ್ಟಿಕೊಂಡು ಶಿಕ್ಷಕರ ಪಾಠ’ ಶೀರ್ಷಿಕೆಯಡಿ ಮಂಗಳವಾರ ವರದಿ ಪ್ರಕಟಗೊಂಡಿತ್ತು. ವರದಿಯಿಂದ ಎಚ್ಚೆತ್ತ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಆಲೆಮನೆಗೆ ದಾಳಿ ನಡೆಸಿ ಮಾಲೀಕನಿಗೆ ನೋಟಿಸ್‌ ನೀಡಿದರು. ನಂತರ, ಆಲೆಮನೆ ಮಾಲೀಕ ಪ್ಲಾಸ್ಟಿಕ್‌, ರಬ್ಬರ್‌, ತೈಲ, ರಾಸಾಯನಿಕ ಬಣ್ಣಗಳ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ.

ಎರಡು ಆಲೆಮನೆಗಳ ನಡುವೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, ಪ್ಲಾಸ್ಟಿಕ್‌ ದಹನದಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇಬ್ಬರು ಶಿಕ್ಷಕಿಯರಿದ್ದು, ಬಾಯಿಗೆ ಬಟ್ಟೆಕಟ್ಟಿಕೊಂಡು ಪಾಠ ಮಾಡುತ್ತಾರೆ. ವಿಪರೀತ ಹೊಗೆ ಶಾಲೆಯನ್ನು ಆವರಿಸುತ್ತಿದ್ದು, ಬಿಸಿಯೂಟ ತಯಾರಿಕೆಗೂ ಸಮಸ್ಯೆಯಾಗಿದೆ. ಎರಡು ವರ್ಷಗಳ ಹಿಂದೆ 50 ಮಕ್ಕಳಿದ್ದ ಈ ಶಾಲೆಯ ದಾಖಲಾತಿ ಈಗ 12ಕ್ಕೆ ಕುಸಿದಿದೆ. ಬಂದ ಶಿಕ್ಷಕರೆಲ್ಲರೂ ವರ್ಗಾವಣೆ ಕೋರುತ್ತಾರೆ. ಈ ಕುರಿತ ವಿವರಗಳನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ADVERTISEMENT

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆಲೆಮನೆ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಮತ್ತೆ ಪ್ಲಾಸ್ಟಿಕ್‌ ದಹನ ಕಂಡುಬಂದರೆ ಆಲೆಮನೆ ಹಾಗೂ ಪರಿಕರ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡ ಲಾಗಿದೆ. ಸುತ್ತಲಿನ ಆಲೆಮನೆ ಮೇಲೆ ನಿಗಾ ವಹಿಸುವಂತೆ ಬಿ.ಹೊಸೂರು ಪಿಡಿಒಗೆ ಸೂಚನೆ ನೀಡಲಾಗಿದೆ ಎಂದು ಕೆಎಸ್‌ಪಿಸಿಬಿ ಜಿಲ್ಲಾ ಪರಿಸರ ಅಧಿಕಾರಿ ಸವಿತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.