ಮಂಡ್ಯ: ‘ಕನ್ನಡ ಸಿನಿಮಾ ರಂಗದಲ್ಲಷ್ಟೇ ಅಲ್ಲ ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸಿ ಹೋಗಿರುವ ರೆಬಲ್‌ಸ್ಟಾರ್ ಅಂಬರೀಷ್ ಅವರ ಜನ ಸೇವೆಯು ಪ್ರಸ್ತುತವಾಗಿವೆ’ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಶ್ಲಾಘಿಸಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಬೆಂಗಳೂರಿನ ಡಾ.ಎಂ.ಎಚ್. ಅಂಬರೀಷ್ ಪೌಂಡೇಷನ್ (ಸಮಾಜಮುಖಿ ಕೈಂಕರ್ಯಗಳ ವೇದಿಕೆ), ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದಲ್ಲಿ ಗುರುವಾರ ನಡೆದ ಅಂಬರೀಷ್ ಅವರ 73ನೇ ಜಯಂತಿ, ಅಂಬರೀಷ್ ಸೇವಾ ಪ್ರಶಸ್ತಿ, ಪ್ರತಿಭಾ ಪುರಸ್ಕಾರ ಹಾಗೂ ಯುವ ವಿವೇಕ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬರುವಾಗ ಏನೂ ತೆಗೆದುಕೊಂಡು ಬರಲ್ಲ, ಅದೇ ರೀತಿ ನಾವು ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಉಳಿದಿರುವ ಆಯಸ್ಸನ್ನು ಜನ ಸೇವೆಗಾಗಿ ಮುಡಿಪಾಗಿಡೋಣ ಎನ್ನುವ ದಿಕ್ಕಿನಲ್ಲಿ ನಿಮ್ಮ ಅಂಬರೀಷ್ ಸಾಗಿ ಹೋಗಿದ್ದಾರೆ. ಪ್ರಸ್ತುತದಲ್ಲಿ ಫೌಂಡೇಷನ್ ಸ್ಥಾಪಿಸಿಕೊಂಡು ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಹೊರಟಿರುವ ನಿಮ್ಮ ಅಭಿಮಾನಕ್ಕೆ ಸದಾ ಋಣಿ’ ಎಂದು ಶ್ಲಾಘಿಸಿದರು.
ಮಂಡ್ಯದ ಸೊಸೆ:
‘ಯಾವುದೇ ಗ್ರಾಮಕ್ಕೆ ಹೋದರು ಅಂಬರೀಷ್ ನೀಡಿರುವ ಅನುದಾನ ಇರಬಹುದು ಅಥವಾ ಸಮುದಾಯ ಭವನ, ದೇವಸ್ಥಾನಗಳು ಕೆಲಸಗಳನ್ನು ಈಗಲೂ ಜನರು ನೆನೆಯುತ್ತಾರೆ. ಅದನ್ನು ನೋಡಿ ನಾನು ಮಂಡ್ಯ ಜಿಲ್ಲೆಯ ಸೊಸೆ ಎನ್ನುವುದು ಹಾಗೂ ನನಗೂ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದನ್ನು ಮರೆಯುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಧೃತಿ, ಸಿ.ಪುನೀತಾ ಹಾಗೂ ಪಿಯುಸಿಯಲ್ಲಿ ಹಿಮಾನಿ, ಸಂಜನಾಗೌಡ, ಸೌಮ್ಯಾ, ಹಂಸವೇಣಿ, ಮೋನಿಕಾ, ಮನೀಷ್‌ಗೌಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಜೊತೆಗೆ ಎಚ್.ಎಂ. ಶಶಾಂಕ್ (ಎನ್‌ಸಿಸಿ), ಹರ್ಷಿತಾ ಎಂ.ಆನಂದ್ (ಎನ್‌ಎಸ್‌ಎಸ್), ಎಂ.ಸಾತ್ವಿಕ್ (ಸ್ಕೌಟ್ಸ್ ಅಂಡ್ ಗೈಡ್ಸ್) ಅವರಿಗೆ ಯುವ ವಿವೇಕಾ ಪುರಸ್ಕಾರ ನೀಡಲಾಯಿತು.
ವಿಶ್ರಾಂತ ಪ್ರಾಂಶುಪಾಲ ಪ್ರೊ.ಬಿ. ಶಂಕರಗೌಡ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್, ಪರಿಸರ ರೂರಲ್‌ನ ಮಂಗಲ ಯೋಗೀಶ್, ಕೆ.ಪಿ. ಅರುಣಕುಮಾರಿ, ಅಭಿಮಾನಿಗಳಾದ ಹರೀಶ್ ಬಾಣಸವಾಡಿ, ಕಾರ್ತಿಕ್‌ಗೌಡ ಕಾವೇರಿನಗರ, ಸತೀಶ್ ಹನಿಯಂಬಾಡಿ, ಮಹೇಶ್ ಚಿಂದಗಿರಿದೊಡ್ಡಿ, ಶ್ರೀನಿವಾಸ್, ಸಿದ್ದೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.