ADVERTISEMENT

ಅವಹೇಳನಕಾರಿ ಪೋಸ್ಟ್‌: ಕ್ರಮಕ್ಕೆ ಮುಖಂಡರ ಆಗ್ರಹ

ಕುಂದು ಕೊರತೆ ಸಭೆ: ಪರಿಶಿಷ್ಟರಿಗೆ ಸ್ಮಶಾನ ಸೌಲಭ್ಯ ಕಲ್ಪಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:34 IST
Last Updated 6 ನವೆಂಬರ್ 2025, 5:34 IST
ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮಂಗಳವಾರ ಆಯೋಜಿಸಿದ್ದ ಎಸ್‌ಸಿ, ಎಸ್‌ಟಿ ಸಮುದಾಯಗಳ ಕುಂದುಕೊರತೆ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು 
ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮಂಗಳವಾರ ಆಯೋಜಿಸಿದ್ದ ಎಸ್‌ಸಿ, ಎಸ್‌ಟಿ ಸಮುದಾಯಗಳ ಕುಂದುಕೊರತೆ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು    

ಮಂಡ್ಯ: ‘ಕೆಲವು ಕಿಡಿಗೇಡಿಗಳು, ದೇಶದ್ರೋಹಿಗಳು ರಾಷ್ಟ್ರನಾಯಕರ ಭಾವಚಿತ್ರಗಳನ್ನು ದುರ್ಬಳಕೆ ಮಾಡಿಕೊಂಡು ಒಂದು ಸಮುದಾಯವನ್ನು ಅಣಕಿಸುವಂಥ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ದೂರು ಕೊಟ್ಟರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಭೀಮಸೇನೆ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಸನ್ನ ಭೀಮಸೇನೆ ದೂರಿದರು. 

ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮಂಗಳವಾರ ಆಯೋಜಿಸಿದ್ದ ಎಸ್‌ಸಿ, ಎಸ್‌ಟಿ ಸಮುದಾಯಗಳ ಕುಂದುಕೊರತೆ ಸಭೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಧ್ಯಕ್ಷತೆಯಲ್ಲಿ ನಡೆಯಿತು. 

ಸಾಮಾಜಿಕ ಜಾಲತಾಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಹೇಳನ ಮಾಡಿ, ಮೀಸಲಾತಿ ಪಡೆಯುವ ಸಮುದಾಯಗಳನ್ನು ವಿರೋಧಿಸುವ ರೀತಿ ಪೋಸ್ಟ್‌ ಹಾಕಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. 

ADVERTISEMENT

ಇದಕ್ಕೆ ಉತ್ತರಿಸಿದ ಎಸ್ಪಿ ಬಾಲದಂಡಿ, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೈಬರ್‌ ಕ್ರೈಂ ವಿಭಾಗಕ್ಕೆ ಮಾಹಿತಿ ನೀಡಿದ್ದೇನೆ ಎಂದರು. 

ಜಿಲ್ಲೆಯಲ್ಲಿ ವಾಸವಿರುವ ಪರಿಶಿಷ್ಟರು ಮತ್ತು ಒಬಿಸಿ ಸಮುದಾಯಗಳಿಗೆ ಸಮರ್ಪಕ ಸ್ಮಶಾನ ಇಲ್ಲ, ಕೆಲವು ಕಡೆ ಸಂಪರ್ಕ ರಸ್ತೆಗಳಿಲ್ಲ. ದೌರ್ಜನ್ಯ ದೂರುಗಳು ಸರಿಯಾಗಿ ದಾಖಲಾಗುತ್ತಿಲ್ಲ ಎಂದು ಮುಖಂಡರು ಸಮಸ್ಯೆ ತೋಡಿಕೊಂಡರು. 

ಸಭೆಯಲ್ಲಿ ಗಂಗರಾಜು ಹನಕೆರೆ, ಜೆ.ರಾಮಯ್ಯ, ಎಚ್.ಎನ್. ನರಸಿಂಹಮೂರ್ತಿ, ವೆಂಕಟಗಿರಿಯಯ್ಯ, ರಮಾನಂದ ತರಿಕೆರೆ, ಲೋಕೇಶ್, ಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರ ಹೋರಾಟಗಾರರು ಕುಂದುಕೊರತೆ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಎಎಸ್ಪಿ, ಡಿವೈಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು. 

‘ಅಸ್ಪೃಶ್ಯತೆ ಮುಕ್ತ ಗ್ರಾಮ’ ಘೋಷಣೆಗೆ ಮನವಿ 

ಮಂಡ್ಯ ಜಿಲ್ಲೆಯಲ್ಲಿ ಒಂದು ಗ್ರಾಮ ಪಂಚಾಯಿತಿಯನ್ನು ಅಸ್ಪೃಶ್ಯತೆ ಆಚರಣೆಯಿಂದ ಮುಕ್ತವಾದ ಗ್ರಾಮ ಎಂದು ಘೋಷಣೆ ಮಾಡಲು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಮುಂದಾಗಬೇಕು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.  ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು ನಾಲ್ಕು ಲಕ್ಷ ಜನರಿದ್ದು ಇಂದಿಗೂ ಅಸ್ಪೃಶ್ಯತೆ ಆಚರಣೆಯಿಂದ ಹೋಟೆಲ್‌  ಕ್ಷೌರದ ಅಂಗಡಿ ಮತ್ತು ದೇವಸ್ಥಾನ ಪ್ರವೇಶಿಸಲು ದಲಿತ ಸಮುದಾಯದವರಿಗೆ ಕೆಲವು ಕಡೆ ನಿರ್ಬಂಧವಿದೆ. ಕುಡಿಯುವ ನೀರು ಬಳಕೆಗೆ ತಾರತಮ್ಯ ಮಾಡಲಾಗುತ್ತಿದೆ. ಇಂಥ ಕೆಟ್ಟ ಆಚರಣೆಗಳನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.