
ಶ್ರೀರಂಗಪಟ್ಟಣ: ‘ವೈಜ್ಞಾನಿಕ ಕ್ರಮದಲ್ಲಿ ಮಾಡುವುದಾದರೆ ಪಶುಪಾಲನೆ ಕೃಷಿಗಿಂತಲೂ ಲಾಭದಾಯಕ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ತಾಲ್ಲೂಕಿನ ಎಂ. ಶೆಟ್ಟಹಳ್ಳಿ ಗ್ರಾಮದಲ್ಲಿ ಪಶು ವೈದ್ಯಕೀಯ ಇಲಾಖೆ ಹಾಗೂ ಮಂಡ್ಯ ಹಾಲು ಒಕ್ಕೂಟದ ಸಹಯೋಗದಲ್ಲಿ ಸೋಮವಾರ ನಡೆದ ರಾಸುಗಳಿಗೆ 8ನೇ ಸುತ್ತಿನ ರಾಷ್ಟ್ರೀಯ ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಹಸು, ಕುರಿ, ಮೇಕೆ, ಕೋಳಿ, ಮೀನು, ಹಂದಿ ಸಾಕಣೆಯಿಂದ ಸಾಕಷ್ಟು ಜನರು ಲಾಭ ಗಳಿಸುತ್ತಿದ್ದಾರೆ. ಮಂಡ್ಯ ಹಾಲು ಒಕ್ಕೂಟಕ್ಕೆ ಸರಬರಾಜು ಮಾಡುವ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇರುವುದು ಹಾಲು ಉತ್ಪಾದಕರಿಗೆ ವರದಾನವಾಗಿದೆ. ರಾಸುಗಳು ಆರೋಗ್ಯವಾಗಿದ್ದರೆ ಗುಣಮಟ್ಟದ ಹಾಲು ಉತ್ಪಾದನೆ ಸಾಧ್ಯ. ಕಾಲುಬಾಯಿ ಜ್ವರ ಇತರ ರೋಗಗಳನ್ನು ತಡೆಗಟ್ಟಲು ರಾಸುಗಳಿಗೆ ಲಸಿಕೆ ಹಾಕಲಾಗುತ್ತಿದ್ದು, ಪಶುಪಾಲಕರು 6 ತಿಂಗಳಿಗೆ ಒಮ್ಮೆ ಲಸಿಕೆ ಹಾಕಿಸಬೇಕು. ಸಂಭಾವ್ಯ ನಷ್ಟದಿಂದ ಪಾರಾಗಲು ವಿಮೆಯನ್ನೂ ಮಾಡಿಸಬೇಕು. ಪಶುಪಾಲನಾ ಇಲಾಖೆಯಿಂದ ಮೇವಿನ ಬೀಜಗಳು, ಮೇವು ಕಟಾವು ಯಂತ್ರ ಇತರ ಸವಲತ್ತುಗಳು ಸಿಗುತ್ತಿದ್ದು ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಮನ್‌ಮುಲ್ ನಿರ್ದೇಶಕ ಬಿ. ಬೋರೇಗೌಡ ಮಾತನಾಡಿ, ‘ತಾಲ್ಲೂಕಿನಲ್ಲಿ ಪ್ರತಿ ದಿನ 75 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಸಹಸ್ರಾರು ಕುಟುಂಬಗಳಿಗೆ ಪಶುಪಾಲನೆ ಆಧಾರವಾಗಿದೆ. ಗುಣಮಟ್ಟದ ಹಾಲು ಉತ್ಪಾದನೆ ಆಗಬೇಕಾದರೆ ರಾಸುಗಳು ಆರೋಗ್ಯವಾಗಿರಬೇಕು. ಅವುಗಳಿಗೆ ಪೌಷ್ಠಿಕ ಆಹಾರ ಕೊಡುವ ಜತೆಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.
ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರವೀಣಕುಮಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ 30 ಸಾವಿರ ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಒಂದು ತಿಂಗಳ ಕಾಲ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, 50 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದರು. ಪಶಯ ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಶಿವಲಿಂಗಯ್ಯ, ಡಾ. ಆನಂದಕುಮಾರ್, ಡಾ.ರಾಘವೇಂದ್ರ, ಡಾ.ಪ್ರಶಾಂತ್, ಮನ್‌ಮುಲ್ ಉಪ ವ್ಯವಸ್ಥಾಪಕ ಪ್ರಸಾದ್, ಎಂಪಿಸಿಎಸ್ ಅಧ್ಯಕ್ಷ ಎಂ.ಎನ್. ಕರೀಗೌಡ, ಕಾರ್ಯದರ್ಶಿ ಧನಂಜಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.