ADVERTISEMENT

ಸುಳ್ಳು ಸುದ್ದಿ ತಂದ ಆತಂಕ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 14:35 IST
Last Updated 1 ಏಪ್ರಿಲ್ 2020, 14:35 IST
ತಹಶೀಲ್ದಾರ್ ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್ ದೊಡ್ಡಹಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಜನರು ಆರೋಗ್ಯ ವಿಚಾರಿಸಿದರು
ತಹಶೀಲ್ದಾರ್ ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್ ದೊಡ್ಡಹಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಜನರು ಆರೋಗ್ಯ ವಿಚಾರಿಸಿದರು   

ಸಂತೇಬಾಚಹಳ್ಳಿ: ಸಮೀಪದ ದೊಡ್ಡಹಾರನಹಳ್ಳಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಬುಧವಾರ ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಸಿತ್ತು. ಆದರೆ ಅದು ಸುಳ್ಳು ಸುದ್ದಿ ಎಂದು ತಿಳಿದ ನಂತರ ಜನರು ನಿಟ್ಟುಸಿರು ಬಿಟ್ಟರು.

ದೊಡ್ಡಹಾರನಹಳ್ಳಿ ಗ್ರಾಮಕ್ಕೆ ದುಬೈ, ಮುಂಬೈನಿಂದ ನೂರಾರು ಜನರು ಬಂದಿದ್ದಾರೆ. 50ಕ್ಕೂ ಹೆಚ್ಚು ಜನರು ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಖಾಸಗಿ ವಾಹಿನಿ ಹಾಗೂ ಸಾಮಾಜಿಕ ಜಾಲತಾಣಗಳನ್ನು ಹರಿದಾಡಿತು.

ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ತಹಶೀಲ್ದಾರ್‌, ತಾಲ್ಲೂಕು ಆರೋಗ್ಯಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದಾಗ ಅದು ಸುಳ್ಳು ಸುದ್ದಿ ಎಂದು ಪತ್ತೆಯಾಯಿತು. ‘ಗ್ರಾಮದಲ್ಲಿ 82 ಮನೆಗಳಿದ್ದು, 434 ಜನಸಂಖ್ಯೆ ಇದೆ. ಯಾರಿಗೂ ಕೆಮ್ಮು, ಜ್ವರ, ಶೀತ, ನೆಗಡಿ ಇರುವುದಿಲ್ಲ. ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿ ಸಂಪೂ‌ರ್ಣ ಸುಳ್ಳು’ ಎಂದು ತಹಶೀಲ್ದಾರ್‌ ಶಿವಮೂರ್ತಿ ಸ್ಪಷ್ಟಪಡಿಸಿದರು.

ADVERTISEMENT

‘ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮುಂಬೈ, ಬೆಂಗಳೂರಿನಿಂದ ಬಂದಿರುವವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಪ್ರತಿದಿನ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಗ್ರಾಮಸ್ಥರು ಆರೋಗ್ಯದಿಂದ ಇದ್ದಾರೆ’ ಎಂದರು.

ಪ್ರಕರಣ ದಾಖಲಿಸಲು ಸೂಚನೆ: ‘ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ. ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇಂತಹ ಸುದ್ದಿಗಳಿಗೆ ಕಿವಿಗೊಡಬಾರದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.