ADVERTISEMENT

ಪಾಕಿಸ್ತಾನದ ಕಿರುಕುಳ ತಪ್ಪಿಸಿಕೊಳ್ಳಲು 370ನೇ ವಿಧಿ ರದ್ದು: ಅಶ್ವತ್ಥ್ ನಾರಾಯಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 14:37 IST
Last Updated 20 ಸೆಪ್ಟೆಂಬರ್ 2019, 14:37 IST
ಡಾ.ಅಶ್ವತ್ಥ್ ನಾರಾಯಣ
ಡಾ.ಅಶ್ವತ್ಥ್ ನಾರಾಯಣ   

ಮಂಡ್ಯ: ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕಿರುಕುಳ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಂವಿಧಾನದ 370ನೇ ವಿಧಿ ರದ್ದು ಮಾಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಐಕ್ಯಾತಾ ಅಭಿಯಾನದ ಅಂಗವಾಗಿ ನಗರದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂತರರಾಷ್ಟ್ರೀಯ ಮಟ್ಟದ ಯಾವುದೇ ಶೃಂಗಸಭೆ, ಮಾತುಕತೆಗಳಲ್ಲೂ ಅಮೆರಿಕ ಸೇರಿ ಅನ್ಯರಾಷ್ಟ್ರಗಳು ಜಮ್ಮು–ಕಾಶ್ಮೀರದ ವಿಚಾರವನ್ನೇ ಪ್ರಸ್ತಾಪ ಮಾಡುತ್ತಿದ್ದವು. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ, ಅಲ್ಲಿ ಏನೇನೋ ಆಗುತ್ತಿದೆ ಎಂದು ಪಾಕಿಸ್ತಾನ ದೂರು ನೀಡುತ್ತಿದ್ದ ಕಾರಣ ಬೇರೆ ರಾಷ್ಟ್ರಗಳು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದವು. ಪಾಕಿಸ್ತಾನದ ಈ ಕಿರುಕುಳದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರ 370ನೇ ವಿಧಿ ರದ್ದು ಮಾಡಿದೆ’ ಎಂದರು.

ADVERTISEMENT

‘ಜಮ್ಮು–ಕಾಶ್ಮೀರ ಈಗ ನಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದು ನಮ್ಮ ಸಂವಿಧಾನ ಅಲ್ಲಿಗೂ ಅನ್ವಯವಾಗುತ್ತದೆ. ಈಗ ಪಾಕಿಸ್ತಾನ ಏನೇ ದೂರು ಕೊಟ್ಟರೂ ಅನ್ಯರಾಷ್ಟ್ರಗಳು ಅದನ್ನು ಕೇಳುವುದಿಲ್ಲ. ಕಾಶ್ಮೀರ ವಿಷಯಕ್ಕೆ ಹಲವು ಯುದ್ಧಗಳಾವಿವೆ, ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಶ್ರೇಷ್ಠ ನಿರ್ಧಾರ ಕೈಗೊಂಡಿದೆ’ಎಂದು ಹೇಳಿದರು.

‘ನಮ್ಮ ದೇಶದಲ್ಲಿ ಸಾಕಷ್ಟು ಬಡತನವಿದೆ. ಆದರೆ ನಮ್ಮ ದೇಶದ ಬಹುಪಾಲು ಆದಾಯವನ್ನು ಜಮ್ಮು–ಕಾಶ್ಮೀರಕ್ಕೆ ಸುರಿಯಲಾಗುತ್ತಿತ್ತು. ಆ ಹಣಕ್ಕೆ ಲೆಕ್ಕವೇ ಸಿಗುತ್ತಿರಲಿಲ್ಲ. ವಿಶೇಷಾಧಿಕಾರದಿಂದಾಗಿ ಕಾಶ್ಮೀರಿಗಳಲ್ಲಿ ಪ್ರತ್ಯೇಕ ರಾಷ್ಟ್ರದ ಭಾವನೆ ಸೃಷ್ಟಿಸಲಾಗಿತ್ತು. ಬಹುತೇಕ ಮಂದಿ ಪಾಕಿಸ್ತಾನ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಅದೆಲ್ಲವೂ ಮುಗಿದ ಅಧ್ಯಾಯ’ ಎಂದರು.

ಸ್ವಾಮೀಜಿ ಮಾತು ವೈಯಕ್ತಿಕ: ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಿಜೆಪಿ ಸರ್ಕಾರ ಬೀಳುವ ಕುರಿತು ಕೋಡಿ ಮಠದ ಶ್ರೀಗಳು ಹೇಳಿರುವ ಹೇಳಿಕೆ ಅವರ ವೈಯಕ್ತಿಕವಾದುದು. ಆದರೆ ನನಗಂತೂ ವಿಶ್ವಾಸವಿದೆ, ನಾವು ಅವಧಿ ಪೂರ್ಣಗೊಳಿಸುತ್ತೇವೆ. ಮುಂದೆಯೂ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ವಿಧಾನಸಭೆಯಲ್ಲಿ ನಮ್ಮ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತೇವೆ’ ಎಂದರು.

‘ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿ ಅವರ ಪಕ್ಷಗಳ ಕಾರ್ಯಕರ್ತರನ್ನು ಹೆದರಿಸುತ್ತಿದ್ದಾರೆ. ಚುನಾವಣೆ ಅಂದರೆ ಅವರಾರಿಗೂ ನಿದ್ದೆ ಬರುವುದಿಲ್ಲ. ನಾವು ಸದಾ ಚುನಾವಣೆಗೆ ಸಿದ್ಧರಿದ್ದೇವೆ, ಹಾಗಂತ ಅವಧಿಗೆ ಮುನ್ನ ಚುನಾವಣೆ ಬರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.