ಮಂಡ್ಯದ ಗಾಂಧಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ನಾನೇಕೆ ನಾಸ್ತಿಕ ಭಗತ್ ಸಿಂಗ್ ಜನ್ಮದಿನಾಚರಣೆ ಅಂಗವಾಗಿ 2ನೇ ರಾಜ್ಯ ಮಟ್ಟದ ವೈಚಾರಿಕ– ನಾಸ್ತಿಕ ವಿಚಾರಗಳ ಮಂಥನ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿದರು
–ಪ್ರಜಾವಾಣಿ ಚಿತ್ರ
ಮಂಡ್ಯ: ‘ಕರ್ಮ ಸಿದ್ಧಾಂತ ಮತ್ತು ಜಾತಕ ನಂಬಬೇಡಿ, ದೇವರುಗಳನ್ನು ಎಚ್ಚರದಿಂದ ನೋಡಿ, ದೇವಾಲಯಗಳ ಕೈಗೆ ನಮ್ಮ ಜುಟ್ಟನ್ನು ಕೊಡುವುದಿಲ್ಲ ಎಂದು ನಿರ್ಧರಿಸಿ, ಮೌಢ್ಯ (ಕಂದಾಚಾರ), ಶೋಷಣೆಯಿಂದ ಹೊರಬನ್ನಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.
ನಗರದ ಗಾಂಧಿ ಭವನದಲ್ಲಿ ಭಾರತೀಯ ವಿಚಾರವಾದಿಗಳ ಒಕ್ಕೂಟ, ನೇಗಿಲಯೋಗಿ ಟ್ರಸ್ಟ್, ಏಯ್ಡ್ ವಿತೌಟ್ ರಿಲಿಜನ್ ಟ್ರಸ್ಟ್, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ಸಹಯೋಗದಲ್ಲಿ ‘ನಾನೇಕೆ ನಾಸ್ತಿಕ ಭಗತ್‌ಸಿಂಗ್’ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ನಡೆದ 2ನೇ ರಾಜ್ಯ ಮಟ್ಟದ ವೈಚಾರಿಕ–ನಾಸ್ತಿಕ ವಿಚಾರಗಳ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದೇವರನ್ನು ನಂಬದಿರುವುದು ನಾಸ್ತಿಕತೆಯಲ್ಲ. ಕಾಶಿ, ಮಧುರೆ ಸೇರಿದಂತೆ ದೇಶದ ಎಲ್ಲ ದೇವಾಲಯಗಳನ್ನು ನೋಡಿದ್ದೇನೆ. ದೇವಾಲಯಗಳನ್ನು ನೋಡಿದರೆ ಅಪರಾಧವಲ್ಲ, ಕಣ್ಣುಮುಚ್ಚಿ ದೇವರನ್ನು ನೋಡುವ ಬದಲು ಕಣ್ಣು ತೆರೆದು ನೋಡುತ್ತೇನೆ. ಏಕೆಂದರೆ, ಅದು ಯಾವ ಶೈಲಿ ಮತ್ತು ಬಣ್ಣಗಳಿಂದ ಕೂಡಿದೆ ಎನ್ನುವುದನ್ನು ತಿಳಿಯಲು’ ಎಂದರು.
ದೇವರ ಕಲ್ಪನೆಗಳನ್ನು ಆಚರಣೆಯಾಗಿ ಪರಿವರ್ತಿಸಿ ಮೂಢನಂಬಿಕೆಯನ್ನಾಗಿಸಲಾಗಿದೆ. ಭಾರತ ದೇಶಕ್ಕೆ ಕರ್ಮ ಸಿದ್ಧಾಂತ ಎನ್ನುವ ಒಂದು ‘ಆಟಂಬಾಂಬ್’ ಅನ್ನು ಎರಡು ಸಾವಿರ ವರ್ಷಗಳ ಹಿಂದೆಯೇ ಹಾಕಲಾಗಿದೆ. ಶತಮಾನಗಳ ಕಾಲ ಬಂಧನದಲ್ಲಿಟ್ಟರೂ ಕೂಡ ನಮಗೆ ಬುದ್ಧಿ ಬಂದಿಲ್ಲ ಎಂದರೆ ಏನು ಹೇಳುವುದು ಹೇಳಿ ಎಂದು ವಿಷಾದಿಸಿದರು.
ವಿಚಾರಶೀಲತೆ ಬೆಳೆಸಿಕೊಳ್ಳಬೇಕಾದರೆ ಕುವೆಂಪು ಅವರನ್ನು ನೋಡಿ ಕಲಿಯಬೇಕು. ಮೂಢನಂಬಿಕೆಗಳಿಂದ ಬಹು ದೂರನೇ ಇರಬೇಕು. ಕೋತಿಗಳು ಸೇತುವೆ ಕಟ್ಟಿದವೋ ಇಲ್ಲವೋ, ವಾಮನು ತನ್ನ ಮೂರು ಹೆಜ್ಜೆಗಳಿಂದ ಭೂಮಂಡಲ ಅಳೆದನೋ ಇಲ್ಲವೋ? ಇದನ್ನು ನಂಬುವುದು ಮೂಢನಂಬಿಕೆ ಆಗಿದೆ. ಪುರಾಣವನ್ನು ಪುರಾಣವಾಗಿ, ಕಾವ್ಯವನ್ನು ಕಾವ್ಯವಾಗಿ, ಇತಿಹಾಸವನ್ನು ಇತಿಹಾಸವಾಗಿಯೇ ನೋಡಬೇಕು ಎಂದರು.
ಮೈಸೂರು ಪತ್ರಕರ್ತ ಬಿ.ಆರ್. ರಂಗಸ್ವಾಮಿ ಮಾತನಾಡಿ, ‘ಭಗತ್‌ಸಿಂಗ್ ಅವರು ಮಾರ್ಕ್ಸ್‌ವಾದಿ, ಲೆನಿನ್‌ವಾದಿ ಚಿಂತಕ ಹಾಗೂ ಹೋರಾಟಗಾರ, ವೈಜ್ಞಾನಿಕ ಸಮಾಜವಾದ ಮೇಲೆ ಅವನ ನಾಸ್ತಿಕತೆ ಇದೆ. ಪ್ರತಿಯೊಬ್ಬ ಕಮ್ಯುನಿಸ್ಟ್‌ನಲ್ಲಿ ನಾಸ್ತಿಕತೆ ಇದೆ. ಭಗತ್‌ಸಿಂಗ್ ಅವರ ಸೈದ್ಧಾಂತಿಕವು ನಾಸ್ತಿಕನಾಗಿ ಬದಲಾವಣೆ ಮಾಡಿರುತ್ತದೆ. ಭಗತ್‌ಸಿಂಗ್ ದೇವರ ಸ್ಮರಣೆಯಿಂದಲೇ ದೂರ’ ಇದ್ದರು ತಿಳಿಸಿದರು.
ರೈತ ಮುಖಂಡ ಟಿ.ಎಲ್.ಕೃಷ್ಣೇಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಆಂಧ್ರ ಶ್ರದ್ಧಾ ನಿರ್ಮೂಲನಾ ಸಮಿತಿ ಹರೀಶ್ ದೇಶ್‌ಮುಖ್, ಅನುವಾದಕ ಶ್ರೀನಿವಾಸ ನಟೇಕರ್, ಪ್ರಾಂಶುಪಾಲರಾದ ವಿ.ಡಿ. ಸುವರ್ಣಾ, ಎಂ.ಜಿ.ವಿನಯ್‌ಕುಮಾರ್ ಭಾಗವಹಿಸಿದ್ದರು.
ಕೃತಿ ಪರಿಚಯ
ಕೃತಿ ಹೆಸರು: ‘ಮೂಢನಂಬಿಕೆ–ವಾಸ್ತವ ಮತ್ತು ಭ್ರಮೆ’
ಅನುವಾದ: ಶ್ರೀನಿವಾಸ ನಟೇಕರ್
ಪ್ರಕಾಶನ: ಆಕೃತಿ ಪುಸ್ತಕ
ಪುಟಗಳು: 204
ಬೆಲೆ: ₹225
ಭಾರತೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಮಾತನಾಡಿ, ‘ನಾಸ್ತಿಕ ಮೇಳ ಮಾಡಿದರೆ ಕೆಲವರ ಕಣ್ಣು ಕೆಂಪಗಾಗುತ್ತದೆ. ದೆಹಲಿಯಲ್ಲಿ ಸಮ್ಮೇಳನ ಮಾಡಲು ಹೊರಟಾಗ ಪೂಜಾರಿಗಳು ಹಾಗೂ ಮುಲ್ಲಾಗಳು ಅವರ ದೇವರನ್ನು ಅಪಮಾನ ಮಾಡುತ್ತಿದ್ದಾರೆಂದು ಹೇಳಿ ಅವಕಾಶ ಕೊಡಲಿಲ್ಲ. ಕಾನೂನಾತ್ಮಕವಾಗಿಯೂ ತಡೆಯೊಡ್ಡಿದರು. ಅದಕ್ಕಾಗಿ ನಾವು ಭಗತ್‌ಸಿಂಗ್ ಹೆಸರಿನಲ್ಲಿ ನಾನೇಕೆ ನಾಸ್ತಿಕ ಎಂಬುದನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಚರ್ಚೆ ನಡೆಸಿದರೆ ಯಾರು ಗಟ್ಸ್ ಇರುವವರು ತಡೆಯುತ್ತಾರೆ ನೋಡೋಣ ಅಂತ ನಾಸ್ತಿಕ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.