ADVERTISEMENT

ಮುಂದಿನ ಪೀಳಿಗೆಗೂ ನೀರು ಸಂರಕ್ಷಿಸಿ: ಸಂಸದ ಸುರೇಶ್

ನಿಟ್ಟೂರು ಕೆರೆಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 16:30 IST
Last Updated 9 ನವೆಂಬರ್ 2019, 16:30 IST
ಭರ್ತಿಯಾದ ನಿಟ್ಟೂರು ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು
ಭರ್ತಿಯಾದ ನಿಟ್ಟೂರು ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು   

ಹಲಗೂರು: ನೀರು ಬಹಳ ಅಮೂಲ್ಯ ಸಂಪನ್ಮೂಲ. ಮಿತವಾಗಿ ಬಳಕೆ ಮಾಡುವ ವಿಶಾಲ ಮನೋಭಾವವನ್ನು ಎಲ್ಲರೂ ಬೆಳೆಸಿಕೊಂಡುಮುಂದಿನ ಪೀಳಿಗೆಗೂ ನೀರನ್ನೂ ಸಂರಕ್ಷಿಸಬೇಕಾದ ಇದೆ ಎಂದು ರಾಮನಗರ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

20 ವರ್ಷಗಳ ನಂತರ ಹಲಗೂರು ಸಮೀಪದ ನಿಟ್ಟೂರು ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿದ ಅವರು, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘20 ವರ್ಷಗಳ ಹಿಂದೆ ಈ ಭಾಗದಲ್ಲಿ ಇನ್ನೂರು ಅಡಿ ಕೊಳವೆ ಬಾವಿ ಕೊರೆದರೆ ರೈತರಿಗೆ ಯಥೇಚ್ಛವಾಗಿ ನೀರು ದೊರಕುತ್ತಿತ್ತು. ಇಂದು ಸಾವಿರ ಅಡಿಗಳಷ್ಟು ಕೊರೆದರೂ ನೀರು ದೊರಕುತ್ತಿಲ್ಲ. ಮನುಷ್ಯ ತನ್ನ ದುರಾಸೆಗಳನ್ನು ಬಿಡದಿದ್ದರೆ ಮುಂದಿನ ದಿನಗಳು ಬಹಳ ಕಷ್ಟಕರವಾಗಲಿವೆ’ ಎಂದರು.

ADVERTISEMENT

‘ಭವಿಷ್ಯದ ಚಿಂತೆ ಇಟ್ಟುಕೊಂಡು ರೈತರು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಬೆಳೆಗಳನ್ನು ಬೆಳೆಯಬೇಕು. ಮೊದಲು ಉತ್ತಮ ಮಳೆಯಾಗುತ್ತಿತ್ತು. ಇಂದು ನಿಗದಿತ ಸಮಯದಲ್ಲಿ ಮಳೆಯಾಗದೇ ಅತಿವೃಷ್ಟಿ, ಅನಾವೃಷ್ಟಿಯಾಗುತ್ತಿದೆ. ರಾಜ್ಯ ಮತ್ತು ಕೇಂದ್ರಗಳೆರಡರಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಜಾರಿಗೆ ಬರಲಿದೆ’ ಎಂದರು.

ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ‘ಶಾಸಕ ಡಿ.ಕೆ.ಶಿವಕುಮಾರ್ ಅವರ ಸಹಕಾರ ಮತ್ತು ಈ ಭಾಗದ ಮುಖಂಡರ ಪ್ರಯತ್ನದಿಂದಾಗಿ ನಿಟ್ಟೂರು ಕೆರೆ ತುಂಬಿದೆ. ಅಂಕನಹಳ್ಳಿ ಏತ ನೀರಾವರಿ ಯೋಜನೆ ಕನಕಪುರ ತಾಲ್ಲೂಕಿನ ಕೆರೆಗಳು ಮತ್ತು ಕೈಲಾಂಚ ಕೆರೆ ತುಂಬಿಸುವ ಯೋಜನೆಯಾಗಿತ್ತು. ಅಂದು ನಿಟ್ಟೂರು ಕೆರೆಗೆ ಒಂದು ವಾಲ್ವ್ ಇಟ್ಟು ನೀರು ತುಂಬಿಸುವಂತೆ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿ ಒಪ್ಪಿಗೆ ಸೂಚಿಸಿದ್ದರು. ಪ್ರತಿಫಲವಾಗಿ ಇಂದು ಕೆರೆ ಭರ್ತಿಯಾಗಿದೆ. ಇದೇ ರೀತಿ ಹಲಗೂರು ಮತ್ತು ಭೀಮಾ ಕೆರೆಗಳನ್ನು ತುಂಬಿಸಲು ವಾಲ್ವ್ ನೀಡಬೇಕು‘ ಎಂದು ಕೋರಿದರು.

ಬೆನಮನಹಳ್ಳಿ ಸರ್ಕಲ್‌ನಿಂದ ನಿಟ್ಟೂರು ಕೆರೆಯವರೆಗೂ ಗಣ್ಯರನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ವೀರಗಾಸೆ, ಪೂಜಾಕುಣಿತ, ಕೀಲು ಬೊಂಬೆಗಳು ಸಾರ್ವಜನಿಕರ ಕಣ್ಮನ ಸೆಳೆಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಮುಖಂಡರಾದ ಲಿಂಗಪಟ್ಟಣ ಗಂಗಾಧರ್, ಕುಂತೂರು ಸೋಮಶೇಖರ್, ತಮ್ಮಣ್ಣಗೌಡ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.