ಮಂಡ್ಯ: ಅನಾಥ ಮಕ್ಕಳಿಗೆ ಮೂಲ ಸೌಲಭ್ಯದ ಜೊತೆಗೆ ಶಿಕ್ಷಣ ಮುಖ್ಯವಾಗಿ ಸಿಗುವಂತಾಗಬೇಕಿದೆ ಎಂದು ಅಂತರ ರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.
ನಗರದ ಕ್ಯಾತುಂಗೆರೆ ವಿಕಸನ ಜೋಗುಳ, ದತ್ತು ಕೇಂದ್ರದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ ವತಿಯಿಂದ ಬುಧವಾರ ನಡೆದ ಅನಾಥ ಮಕ್ಕಳಿಗೆ ಉಡುಪು, ಬೆಡ್‌ಶೀಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಗವಿಕಲ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅವರಿಗೂ ಪ್ರೋತ್ಸಹ ಹಾಗೂ ಸಹಕಾರ ಸಿಗಬೇಕು. ಆ ನಿಟ್ಟಿನಲ್ಲಿ ನಮ್ಮ ಅಲಯನ್ಸ್ ಸಂಸ್ಥೆಗಳು ಮುಖ್ಯಧ್ಯೇಯವೆಂದು ಪರಿಗಣಿಸಿ ಸೇವೆಯಲ್ಲಿ ನಿರತವಾಗಿವೆ. ಇಲ್ಲಿ ಚಿಕಿತ್ಸೆಯ ನೆರವು ಮತ್ತು ಮಾರಕ ರೋಗಗಳಾದ ಕ್ಯಾನ್ಸರ್ ತಡೆಗಟ್ಟಲು ಅಭಿಯಾನದ ಶಿಬಿರಗಳು ಹೆಚ್ಚು ನಡೆಯಬೇಕು ಎಂದು ಸಲಹೆ ನೀಡಿದರು.
ಅನಾಥ ಎನ್ನವು ಭಾವನೆ ಈ ಮಕ್ಕಳಿಗೆ ಕಾಣಬಾರದು, ಅಲ್ಲದೇ ಅಂಗವಿಕಲತೆ ಎನ್ನುವುದು ಶಾಪವಲ್ಲ ಎನ್ನುವ ಧೈರ್ಯ ತುಂಬಬೇಕು. ಆ ಮೂಲಕ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು. ಸಮಾಜದಲ್ಲಿ ವೃದ್ಧರು ಸೇರಿದಂತೆ ಆಸರೆ ಇಲ್ಲದವರಿಗೆ ಸಹಕರಿಸುವ ಮನಸುಗಳು ಹೆಚ್ಚಬೇಕು ಎಂದು ಮನವಿ ಮಾಡಿದರು.
ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು ಮಾತನಾಡಿ, ಶಕ್ತಿ ಇರದವರಿಗೆ ಶಕ್ತಿ ತುಂಬುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಶ್ರೀಮಂತರು, ಸೇವಾಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಕುಮಾರ್, ಅಲಯನ್ಸ್ ಸಂಸ್ಥೆ 2ನೇ ಗೌವರ್ನರ್ ಚಂದ್ರಶೇಖರ್, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಮೋಹನ್ ಕುಮಾರ್, ಮುಖಂಡರಾದ ದರಸಗುಪ್ಪೆ ಧನಂಜಯ, ಪ್ರತಿಭಾಂಜಲಿ ಡೇವಿಡ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.