ADVERTISEMENT

ಮಂಡ್ಯ: ಹಾಸಿಗೆ ನಿರ್ವಹಣೆ ಮೇಲುಸ್ತುವಾರಿ ಜಿ.ಪಂ ಸಿಇಒಗೆ

ಮಿಮ್ಸ್‌ ಸಿಬ್ಬಂದಿ, ಡಿಎಚ್‌ಒ ವಿರುದ್ಧ ದೂರು, ನೋಡೆಲ್‌ ಅಧಿಕಾರಿ ನೇಮಿಸಿದ ಜಿಲ್ಲಾಧಿಕಾರಿ

ಎಂ.ಎನ್.ಯೋಗೇಶ್‌
Published 14 ಮೇ 2021, 19:30 IST
Last Updated 14 ಮೇ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಹಾಸಿಗೆ ನಿರ್ವಹಣೆ ವಿಚಾರದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ಬಂದ ಕಾರಣ ಹಾಸಿಗೆ ನಿರ್ವಹಣೆ ಮೇಲುಸ್ತುವಾರಿ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯಾಪ್ರಭು ಅವರಿಗೆ ವಹಿಸಲಾಗಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಅಸಂಖ್ಯಾತ ರೋಗಿಗಳಿಗೆ ಹಾಸಿಗೆ ದೊರೆಯದೇ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಮಿಮ್ಸ್‌ ಆಸ್ಪತ್ರೆ ಕೋವಿಡ್‌ ವಾರ್ಡ್‌ ಕಾರಿಡಾರ್‌ನಲ್ಲಿ ಕಾಯುತ್ತಾ ಕುಳಿತುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಆಟೊ, ಆಂಬುಲೆನ್ಸ್‌ಗಳಲ್ಲೇ ಆಮ್ಲಜನಕ ಸಿಲಿಂಡರ್‌ ಹಚ್ಚಿ ಕೂರಿಸಲಾಗಿದೆ. 8 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆ ಮೀಸಲಿಟ್ಟಿದ್ದರೂ ರೋಗಿಗಳಿಗೆ ಹಾಸಿಗೆ ದೊರೆಯುತ್ತಿಲ್ಲ. ಇದಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹಾಗೂ ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಅವರ ನಡುವೆ ನಮನ್ವಯತೆ ಕೊರತೆಯಿಂದಾಗಿ ಹಾಸಿಗೆ ದೊರೆಯುತ್ತಿಲ್ಲ ಎಂಬ ದೂರು ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿತ್ತು. ಹಾಸಿಗೆ ನೀಡಲು ನಿರಾಕರಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿಎಚ್‌ಒ ವಿಫಲರಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆ ಮಾಲೀಕರ ಮೇಲೆ ಅವರು ಮೃದು ಧೋರಣೆ ಹೊಂದಿದ್ದಾರೆ. ತುರ್ತು ಅವಶ್ಯಕತೆಯುಳ್ಳವರಿಗೆ ಹಾಸಿಗೆ ದೊರೆಯುತ್ತಿಲ್ಲ, ಪ್ರಭಾವಿಗಳಿಗೆ ಮಾತ್ರ ಹಾಸಿಗೆ ನೀಡುತ್ತಿದ್ಧಾರೆ ಎಂಬ ದೂರುಗಳಿದ್ದವು.

ADVERTISEMENT

ದೂರು ಹೆಚ್ಚಾದ ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರು ಜಿ.ಪಂ ಸಿಇಒ ದಿವ್ಯಾ ಪ್ರಭು ಅವರನ್ನು ಹಾಸಿಗೆ ನಿರ್ವಹಣೆ ಮೇಲುಸ್ತುವಾರಿ ನೋಡೆಲ್‌ ಅಧಿಕಾರಿಯನ್ನಾಗಿ ನೇಮಿಸಿ ಮೇ 12ರಂದು ಆದೇಶ ಹೊರಡಿಸಿದ್ದಾರೆ. ಅಂದಿನ ದಿನವೇ ಮಿಮ್ಸ್‌ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ದಿವ್ಯಾಪ್ರಭು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳ ಹಾಸಿಗೆ ವಿವರ ಪಡೆದಿದ್ದಾರೆ.

ವಾರ್‌ ರೂಂ ಸ್ಥಾಪನೆಗೆ ಸಿದ್ಧತೆ: ಸದ್ಯ ಆಮ್ಲಜನಕ ಹಾಸಿಗೆಗಳ ವಿವರ, ರೋಗಿಗಳ ದಾಖಲಾತಿ, ವೆಂಟಿಲೇಟರ್‌ಗಳ ಮಾಹತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಭೌತಿಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ದಿವ್ಯಾ ಪ್ರಭು ಅವರು ಸಕಲ ವಿವರವನ್ನು ಬೆಂಗಳೂರು ಮಾದರಿಯಲ್ಲಿ ಸಾಫ್ಟ್‌ವೇರ್‌ ಬಳಸಿ ನಿರ್ವಹಣೆ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನ ರೀತಿಯಲ್ಲೇ ವಾರ್‌ ರೂಂ ರೂಪಿಸಿ ಸಿಬ್ಬಂದಿ ನೇಮಕ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಾರೆ.

1 ಜಿಲ್ಲಾಸ್ಪತ್ರೆ, 6 ತಾಲ್ಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಸಮಗ್ರ ಹಾಸಿಗೆಗಳ ಮಾಹಿತಿ ಒಂದೇ ವೇದಿಕೆಯಡಿ ತರಲು ಚಿಂತಿಸಲಾಗುತ್ತಿದೆ. ರೋಗಿಗಳು ಎಷ್ಟು ದಿನಗಳಿಂದ ಆಮ್ಲಜನಕ ಸೌಲಭ್ಯದ ಹಾಸಿಗೆಯಲ್ಲಿದ್ದಾರೆ. ಯಾವಾಗ ಬಿಡುಗಡೆ ಹೊಂದುತ್ತಾರೆ. ಮುಂದೆ ಆ ಹಾಸಿಗೆ ಯಾರಿಗೆ ದೊರೆಯಬೇಕು ಎಂಬೆಲ್ಲ ಸಮಗ್ರ ಮಾಹಿತಿ ಒಂದೇ ವೇದಿಕೆತೆ ತರುವ ಯತ್ನ ನಡೆಯುತ್ತಿದೆ.

‘ಹಾಸಿಗೆಗಳ ವಿವರ ಯಾವುದೇ ಗೊಂದಲಗಳಿಲ್ಲದೇ ಸಮಗ್ರವಾಗಿ ದೊರೆಯಬೇಕು. ಅನವಶ್ಯಕವಾಗಿ ರೋಗಿಗಳನ್ನು ಕಾಯಿಸಬಾರದು. ಖಾಸಗಿ ಆಸ್ಪತ್ರೆಯೂ ಸೇರಿದಂತೆ ಎಲ್ಲೆಲ್ಲಿ ಹಾಸಿಗೆ ಖಾಲಿ ಇದೆ ಎಂಬುದನ್ನು ತಕ್ಷಣ ತಿಳಿಯುವಂತಾಗಬೇಕು. ಹಾಸಿಗೆ ದೊರೆಯುತ್ತಿಲ್ಲ ಎಂದಾದರೆ ತಕ್ಷಣವೇ ರೋಗಿಗಳಿಗೆ ತಿಳಿಸಬೇಕು ಎಂಬ ಉದ್ದೇಶದಿಂದ ಸಮಗ್ರ ವಿವರವನ್ನು ಒಂದೇ ವೇದಿಕೆಗೆ ತರಲಾಗುವುದು. ಇನ್ನೆರಡು ದಿನದಲ್ಲಿ ಅಂತಿಮಗೊಳಿಸಲಾಗುವುದು’ ಎಂದು ಜಿ.ಪಂ ಸಿಇಒ ದಿವ್ಯಾ ಪ್ರಭು ತಿಳಿಸಿದರು.

******

ದಿಢೀರ್‌ ಭೇಟಿ, ಪರಿಶೀಲನೆಗೆ ತಂಡ

ಖಾಸಗಿ ಆಸ್ಪತ್ರೆಗಳಿಗೆ ದಿಢೀರ್‌ ಭೇಟಿ ನೀಡಿ, ಹಾಸಿಗೆ ನಿರ್ವಹಣೆಯನ್ನು ಪರಿಶೀಲಿಸಲು ಪೊಲೀಸ್‌ ಸಿಬ್ಬಂದಿ ನೇತೃತ್ವದ ಒಂದು ತಂಡ ರಚನೆ ಮಾಡಲಾಗುತ್ತಿದೆ. ಈ ತಂಡ ಹಾಸಿಗೆ ವಿವರ, ರೋಗಿಗಳ ದಾಖಲಾತಿ ವಿವರಗಳನ್ನು ಪರಿಶೀಲನೆ ನಡೆಸಲಿದೆ.

ಈ ತಂಡದ ಸದಸ್ಯರು ಪಿಪಿಇ ಕಿಟರ್‌ ಧರಿಸಿ ಕೋವಿಡ್‌ ವಾರ್ಡ್‌ನೊಳಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಮೀಸಲಿಟ್ಟ ಹಾಸಿಗೆಗಳಲ್ಲಿ ಕೋವಿಡ್‌ ರೋಗಿಗಳನ್ನು ದಾಖಲು ಮಾಡಿಲ್ಲದಿದ್ದರೆ ಸ್ಥಳದಲ್ಲೇ ಈ ತಂಡ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಿದೆ.

***

ಪ್ರತಿ ಖಾಸಗಿ ಆಸ್ಪತ್ರೆಗೂ ಒಬ್ಬ ಸಿಬ್ಬಂದಿ ನೇಮಕ ಮಾಡಲಾಗುವುದು. ಅವರು ರೋಗಿಗಳ ದಾಖಲಾತಿ, ಬಿಡುಗಡೆ ಕುರಿತ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ

– ದಿವ್ಯಾ ಪ್ರಭು, ಜಿಲ್ಲಾ ನೋಡೆಲ್‌ ಅಧಿಕಾರಿ, ಹಾಸಿಗೆ ನಿರ್ವಹಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.