ADVERTISEMENT

ಮಂಡ್ಯ: ಮಿಮ್ಸ್‌ನಲ್ಲಿ ಪ್ರಭಾವಿಗಳಿಗೆ ಮಾತ್ರ ಹಾಸಿಗೆ

ಡಿಎಚ್‌ಒ– ಮಿಮ್ಸ್‌ ನಿರ್ದೇಶಕರ ನಡುವೆ ಸಮನ್ವಯತೆ ಕೊರತೆ, ಕಾರಿಡಾರ್‌ನಲ್ಲೇ ಆಮ್ಲಜನಕ ಅಳವಡಿಕೆ

ಎಂ.ಎನ್.ಯೋಗೇಶ್‌
Published 10 ಮೇ 2021, 19:30 IST
Last Updated 10 ಮೇ 2021, 19:30 IST
ಮಿಮ್ಸ್‌ ಕೋವಿಡ್‌ ವಾರ್ಡ್‌ ಕಾರಿಡಾರ್‌ನಲ್ಲೇ ತಾತ್ಕಾಲಿಕವಾಗಿ ರೋಗಿಗಳಿಗೆ ಆಮ್ಲಜನಕ ಸಿಲಿಂಡರ್‌ ಅಳವಡಿಸಿದರು
ಮಿಮ್ಸ್‌ ಕೋವಿಡ್‌ ವಾರ್ಡ್‌ ಕಾರಿಡಾರ್‌ನಲ್ಲೇ ತಾತ್ಕಾಲಿಕವಾಗಿ ರೋಗಿಗಳಿಗೆ ಆಮ್ಲಜನಕ ಸಿಲಿಂಡರ್‌ ಅಳವಡಿಸಿದರು   

ಮಂಡ್ಯ: ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಮಿಮ್ಸ್‌ ನಿರ್ದೇಶಕರ ಸಮನ್ವಯತೆಯ ಕೊರತೆಯಿಂದಾಗಿ ತುರ್ತು ಅಗತ್ಯ ಇರುವ ಬಡ ಕೋವಿಡ್‌ ರೋಗಿಗಳಿಗೆ ಹಾಸಿಗೆ ದೊರೆಯದಾಗಿದೆ. ರಾಜಕಾರಣಿಗಳ ಪ್ರಭಾವದೊಂದಿಗೆ ಬರುತ್ತಿರುವ ರೋಗಿಗಳಿಗೆ ಅನಾಯಾಸವಾಗಿ ಹಾಸಿಗೆ ದೊರೆಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಆಮ್ಲಜನಕ ಪ್ರಮಾಣ ಕಡಿಮೆಯಾಗಿ ನಿತ್ರಾಣ ಸ್ಥಿತಿಯಲ್ಲಿರುವ ರೋಗಿಗಳು ಮಿಮ್ಸ್‌ ಕೋವಿಡ್‌ ವಾರ್ಡ್‌ನಲ್ಲಿ ದಿನಗಟ್ಟಲೇ ಕಾಯುತ್ತಿದ್ದಾರೆ. ಹಾಸಿಗೆ ಇಲ್ಲ ಬೇರೆಡೆ ತೆರಳಿ, ಬದಲಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಿಬ್ಬಂದಿ ಕೇಳಿಕೊಂಡರೂ ರೋಗಿಗಳು ಕೇಳುತ್ತಿಲ್ಲ. ವಾರ್ಡ್‌ನ ಕಾರಿಡಾರ್‌ನಲ್ಲೇ ಕಾಯುತ್ತಾ ಕುಳಿತಿದ್ದಾರೆ. ಅವರ ಪ್ರಾಣ ಅಪಾಯದಲ್ಲಿದ್ದು ಮಾನವೀಯತೆ ದೃಷ್ಟಿಯಿಂದ ಅಲ್ಲಿಯ ಸಿಬ್ಬಂದಿ ಸಿಲಿಂಡರ್‌ ಹಚ್ಚಿ ತಾತ್ಕಾಲಿಕವಾಗಿ ಆಮ್ಲಜನರ ಪೂರೈಸುತ್ತಿದ್ದಾರೆ.

2–3 ದಿನವಾದರೂ ಪರವಾಗಿಲ್ಲ ಹಾಸಿಗೆ ಕೊಡಿ ಎಂದು ಬೇಡುತ್ತಿರುವ ರೋಗಿಗಳು ಅಲ್ಲೇ ಕಾಯುತ್ತಾ ಕುಳಿತಿದ್ದಾರೆ. ತಾತ್ಕಾಲಿಕವಾಗಿ ಅಳವಡಿಸಲಾಗಿರುವ ಸಿಲಿಂಡರ್‌ನಲ್ಲಿ ಆಮ್ಲಜನಕ ಮುಗಿದರೆ ಅವರ ಪ್ರಾಣ ಪಕ್ಷಿ ಹಾರಿ ಹೋಗುವ ಅಪಾಯವಿದೆ. ಅವರನ್ನು ವಾರ್ಡ್‌ಗೆ ತೆಗೆದುಕೊಳ್ಳಲೂ ಆಗದೆ, ಹೊರಗೆ ಕಳುಹಿಸಲೂ ಆಗದೆ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಕಾರಿಡಾರ್‌ನಲ್ಲಿ ಕಾಯುತ್ತಿರುವ ರೋಗಿಗಳಿಗೆ ಹಾಸಿಗೆ ಕೊಡಲು ವಿಫಲವಾಗಿರುವ ಆರೋಗ್ಯಾಧಿಕಾರಿಗಳು ತಮ್ಮ ಸಂಬಂಧಿಗಳು, ಜನಪ್ರತಿನಿಧಿಗಳು ಹೇಳುವ ರೋಗಿಗಳಿಗೆ ಮಾತ್ರ ಹಾಸಿಗೆ ಕೊಡುತ್ತಿದ್ದಾರೆ. ಇದನ್ನು ಕಣ್ಣಾರೆ ನೋಡುತ್ತಿರು ಬಡ ರೋಗಿಗಳು, ಅವರ ಸಂಬಂಧಿಗಳು ವೈದ್ಯರ ವಿರುದ್ಧ ಜಗಳಕ್ಕೆ ಇಳಿಯುತ್ತಿದ್ದಾರೆ. ನಿತ್ಯವೂ ಕೋವಿಡ್ ವಾರ್ಡ್‌ ಬಳಿ ಜಗಳ ಸಾಮಾನ್ಯ ಎಂಬಂತಾಗಿದೆ.

‘ನನ್ನ ತಂದೆ 2 ದಿನದಿಂದ ಕಾರಿಡಾರ್‌ನಲ್ಲೇ ಕಾಯುತ್ತಿದ್ದಾರೆ, ಅವರಿಗೆ ಹಾಸಿಗೆ ಕೊಡುತ್ತಿಲ್ಲ. ಆದರೆ ಈಗ ಬಂದ ಶಾಸಕರೊಬ್ಬರ ಸಂಬಂಧಿಗೆ ಹಾಸಿಗೆ ಕೊಟ್ಟಿದ್ದಾರೆ. ಮಿಮ್ಸ್‌ ನಿರ್ದೇಶಕರನ್ನು ಕೇಳಿದರೆ, ಡಿಎಚ್‌ಒ ಕೇಳಿ ಎನ್ನುತ್ತಾರೆ. ಡಿಎಚ್‌ಒ ಕೇಳಿದರೆ ಮಿಮ್ಸ್‌ ನಿರ್ದೇಶಕರನ್ನು ಕೇಳಿ ಎನ್ನುತ್ತಾರೆ. ಈ ಅಧಿಕಾರಿಗಳು ಬಡ ರೋಗಿಗಳನ್ನು ಕೊಲ್ಲುತ್ತಿದ್ದಾರೆ’ ಎಂದು ಕೋವಿಡ್‌ ರೋಗಿಯ ಸಂಬಂಧಿಯೊಬ್ಬರು ಕಣ್ಣೀರು ಹಾಕಿದರು.

ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಯೋಜನೆ ಅಡಿ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ದಾಖಲು ಮಾಡುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಎಬಿಆರ್‌ಕೆ ಅರ್ಜಿ ತುಂಬಿ, ಆರೋಗ್ಯ ಇಲಾಖೆಯ ಸಾಫ್ಟ್‌ವೇರ್‌ನಲ್ಲಿ ರೋಗಿಗಳ ಮಾಹಿತಿ ದಾಖಲು ಮಾಡಿಕೊಂಡ ನಂತರ ರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳಿ ದಾಖಲಾಗಬಹುದು. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಗಳ ಮಾಹಿತಿ ದಾಖಲು ಮಾಡಲು ನಿರಾಕರಿಸುತ್ತಿದ್ದಾರೆ.

‘ಎಬಿಆರ್‌ಕೆ ಅರ್ಜಿ ತುಂಬಿದ ನಂತರ ಭಾರತೀನಗರದ ಜಿ.ಮಾದೇಗೌಡ ಆಸ್ಪತ್ರೆಗೆ ತೆರಳಿದ್ದೆವು. ಆದರೆ ಅಲ್ಲಿ, ಆರೋಗ್ಯ ಇಲಾಖೆಯವರು ಮಾಹಿತಿ ದಾಖಲು ಮಾಡಿಲ್ಲ ಎಂದು ತಿಳಿಸಿ ವಾಪಸ್‌ ಕಳುಹಿಸಿದರು. ಡಿಎಚ್‌ಒ ಕೇಳಿದರೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಇಲ್ಲಿ ಬೆಡ್‌ ಬ್ಲಾಕಿಂಗ್‌ ದಂಧೆ ನಡೆಸುತ್ತಿದ್ದಾರೆ’ ಎಂದು ನಾಗಮಂಗಲದ ರೋಗಿಯೊಬ್ಬರು ಆರೋಪಿಸಿದರು.

*******

ಡಿಎಚ್‌ಒ ವಿರುದ್ಧ ದೂರು

ಕೋವಿಡ್‌ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಡಿಎಚ್ಒ ಡಾ.ಎಚ್‌.ಪಿ.ಮಂಚೇಗೌಡ ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿ ಮಿಮ್ಸ್‌ ವೈದ್ಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

‘ರೋಗಿಗಳನ್ನು ದಾಖಲು ಮಾಡಿಕೊಳ್ಳದ ಖಾಸಗಿ ಆಸ್ಪತ್ರೆಗಳಿಗೆ ಡಿಎಚ್‌ಒ ನೋಟಿಸ್‌ ನೀಡುತ್ತಿಲ್ಲ. ತಮ್ಮ ಅಧಿಕಾರ ಚಲಾಯಿಸಿ ಖಾಸಗಿ ಆಸ್ಪತ್ರೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸೌಮ್ಯ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಮಿಮ್ಸ್‌ ಸಿಬ್ಬಂದಿಯೊಬ್ಬರು ದೂರಿದರು.

********

ಆರಂಭಗೊಳ್ಳದ ಹೊಸ ವಾರ್ಡ್‌

ಮಿಮ್ಸ್‌ನಲ್ಲಿ ಹೆಚ್ಚುವರಿಯಾಗಿ 150 ಆಮ್ಲಜನಕ ಹಾಸಿಗೆಗಳ ಹೊಸ ವಾರ್ಡ್‌ ಸಿದ್ಧಗೊಂಡಿದ್ದರೂ ಆಮ್ಲಜನಕ ಕೊರತೆಯಿಂದ ರೋಗಿಗಳನ್ನು ದಾಖಲು ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ ಮಿಮ್ಸ್‌ಗೆ 10 ಕೆಎಲ್‌ ಆಮ್ಲಜನಕ ಪೂರೈಕೆಯಾಗುತ್ತಿದೆ. ಹೊಸ ವಾರ್ಡ್‌ ಆರಂಭಿಸಲು ಇನ್ನೂ 3–4 ಕೆಎಲ್‌ ಆಮ್ಲಜನಕದ ಅವಶ್ಯಕತೆ ಇದೆ.

‘ಪೂರೈಕೆದಾರರು ಹೆಚ್ಚುವರಿ ಆಮ್ಲಜನಕ ಪೂರೈಕೆ ಮಾಡುವ ಕುರಿತು ಬರವಣಿಗೆಯಲ್ಲಿ ಭರವಸೆ ನೀಡಿದರೆ ಮಾತ್ರ ಹೊಸ ವಾರ್ಡ್‌ನಲ್ಲಿ ರೋಗಿಗಳನ್ನು ದಾಖಲು ಮಾಡಲು ಸಾಧ್ಯ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಹೇಳಿದರು.

*****

ಇರುವ ಹಾಸಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ

-ಡಾ.ಎಚ್‌.ಪಿ.ಮಂಚೇಗೌಡ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.