ADVERTISEMENT

ಸಂವಿಧಾನ ಜಾರಿಯಿಂದ ಬಡತನ, ಜಾರಿ ದೂರ : ಬಂತೆ ಬೋಧಿದತ್ತ ಅಭಿಮತ

ಗೌರವ ಸಮರ್ಪಣಾ ಸಮಾರಂಭದಲ್ಲಿ ಬಂತೆ ಬೋಧಿದತ್ತ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 16:27 IST
Last Updated 10 ಡಿಸೆಂಬರ್ 2019, 16:27 IST
ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಡೆದ ಸಂವಿಧಾನಕ್ಕೆ ಗೌರವಾರ್ಪಣಾ ಸಮಾರಂಭದದಲ್ಲಿ ನಳಂದ ಬುದ್ಧವಿಹಾರದ ಮುಖ್ಯಸ್ಥ ಬಂತೆ ಬೋಧಿದತ್ತ ಮಾತನಾಡಿದರು
ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಡೆದ ಸಂವಿಧಾನಕ್ಕೆ ಗೌರವಾರ್ಪಣಾ ಸಮಾರಂಭದದಲ್ಲಿ ನಳಂದ ಬುದ್ಧವಿಹಾರದ ಮುಖ್ಯಸ್ಥ ಬಂತೆ ಬೋಧಿದತ್ತ ಮಾತನಾಡಿದರು   

ಮಂಡ್ಯ: ‘ಸಂವಿಧಾನದ ಆಶಯಗಳು ಸಮರ್ಪಕವಾಗಿ ಜಾರಿಯಾದರೆ ದೇಶದಲ್ಲಿನ ಜಾತಿ ವ್ಯವಸ್ಥೆ, ಬಡತನ, ಮನಸ್ಸು ಮನಸ್ಸುಗಳ ನಡುವಿನ ವೈಮನಸ್ಸು ದೂರವಾಗುತ್ತವೆ’ ಎಂದು ನಳಂದ ಬುದ್ಧ ವಿಹಾರದ ಮುಖ್ಯಸ್ಥ ಬಂತೆ ಬೋಧಿದತ್ತ ಹೇಳಿದರು.

ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದ ಕೆವಿಎಸ್‌ ಶತಮಾನೋತ್ಸವ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂವಿಧಾನಕ್ಕೆ ಗೌರವಾರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಅಂಬೇಡ್ಕರ್‌ ಅವರು ಎಲ್ಲಾ ವರ್ಗದ ಜನರಿಗೂ ಅನ್ವಯವಾಗುವಂತೆ ರಚಿಸಿರುವ ಸಂವಿಧಾನವನ್ನು ಜಾತಿಯಿಂದಾಚೆಗೆ, ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಅನುಸರಿಸಿಸಬೇಕು. ಆ ರೀತಿಯ ಸ್ವೀಕರಿಸಿದ್ದರೆ ಸಮಾಜದಲ್ಲಿ ಯಾವುದೇ ಅನ್ಯಾಯಗಳು ನಡೆಯುತ್ತಿರಲಿಲ್ಲ. ಯಾವುದೇ ಅಪರಾಧಗಳು ಘಟಿಸುತ್ತಿರಲಿಲ್ಲ. ಸಂವಿಧಾನ ಅಸ್ತಿತ್ವ ಬಲಗೊಳ್ಳಬೇಕಾದರೆ ಅದನ್ನು ಯಥಾವತ್ತಾಗಿ, ಕರಾರುವಕ್ಕಾಗಿ ಜಾರಿಗೆ ತರಬೇಕು’ ಎಂದು ಹೇಳಿದರು.

ADVERTISEMENT

‘ಸಂವಿಧಾನ ರಚನೆಯ ಬಗ್ಗೆ ಜನರ ಮನಸ್ಸಿನಲ್ಲಿ ಇಲ್ಲದ ಜಿಜ್ಞಾಸೆಗಳನ್ನು ಮನುವಾದಿಗಳು ಹುಟ್ಟುಹಾಕುತ್ತಿದ್ದಾರೆ. ಅಂಬೇಡ್ಕರ್‌ ಸಂವಿಧಾನವನ್ನು ರಚಿಸಿಯೇ ಇಲ್ಲ ಎಂಬಂತೆ ಬಿಂಬಿಸಲು ಇಂದಿಗೂ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಅಂಬೇಡ್ಕರ್‌ ಅವರು ಸಂವಿಧಾನ ಬರೆದಿಲ್ಲ ಎಂದಾದರೆ ಅದನ್ನು ದೇಶಕ್ಕೆ ಒಪ್ಪಿಸುವ ಕೆಲಸ ಮಾಡುತ್ತಿರಲಿಲ್ಲ. ಜನರ ಮನಸ್ಸಿನಲ್ಲಿ ಇನ್ನಿಲ್ಲದ ಭಾವನೆ ಮೂಡಿಸಲು ಹೊರಟಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳನ್ನು ಎದುರಿಸಿ ಅವುಗಳಿಗೆ ಸಮರ್ಪಕವಾದ ಉತ್ತರ ನೀಡಿದ್ದರು. ಅಲ್ಲದೆ ಸಂವಿಧಾನ ರಚನಾ ಸಭೆಯ ಸದಸ್ಯ ಟಿ.ಟಿ.ಕೃಷ್ಣಮಾಚಾರಿ ಅವರು ಕೂಡ ಎಲ್ಲಾ ಸದಸ್ಯರು ಇರದಿದ್ದರೂ ಅಂಬೇಡ್ಕರ್‌ ಅವರು ಒಬ್ಬರೇ ಸಂವಿಧಾನ ರಚಿಸಿದ್ದರು ಎಂಬ ಹೇಳಿಕೆ ಇಂದಿಗೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ, ‘ಸಂವಿಧಾನದ ಆಶಯದಿಂದ ಶೋಷಿತರು ವಿಕಾಸ, ಸ್ವಾವಲಂಬನೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸನ್ನಿವೇಶ ಎದುರಾಗಿದೆ. ಅಂಬೇಡ್ಕರ್‌ ಅವರ ಸಮಾನತೆ, ಮಾನವೀಯತೆ ತತ್ವ ಸಿದ್ಧಾಂತಗಳ ಮೇಲೆ ಮಾರಕವಾಗುವ ರೀತಿಯಲ್ಲಿ ಶೋಷಿತರ ಮೇಲೆ ಗಧಾಪ್ರಹಾರ ನಡೆಯುತ್ತಿದೆ’ ಎಂದು ಹೇಳಿದರು.

‘ಸಂವಿಧಾನದ ಫಲವನ್ನು ಉಂಡವರೇ ಅದನ್ನು ವಧೆ ಮಾಡುವ ಕೆಲಸದಲ್ಲಿ ತೊಡಗುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ಶಿಕ್ಷಣ ಇಲಾಖೆಯ ಮೂಲಕ ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ವಿಷ ಬೀಜ ಬಿತ್ತಿ, ಅಂಬೇಡ್ಕರ್‌ ತೇಜೋವಧೆಗೆ ಯತ್ನಿಸಲಾಗಿತ್ತು. ಇದನ್ನು ವಿರೋಧಿಸುವ ಕೆಲಸ ಮಾಡಬೇಕಾದ ವಿರೋಧ ಪಕ್ಷವೂ ಸುಮ್ಮನಿರುವುದು ಅವರ ಆಶಯಗಳನ್ನು ಬಹಿರಂಗಗೊಳಿಸಿದೆ’ ಎಂದರು.

ಪ್ರಗತಿಪರ ಚಿಂತಕ ಬಿ.ಟಿ.ವಿಶ್ವನಾಥ್‌, ದಲಿತ ಮುಖಂಡರಾದ ಹನುಮಂತರಾಯಪ್ಪ, ಪಾರ್ವತಮ್ಮ, ಆನಂದ್‌, ರಮೇಶ್‌ ಬಂಡಿಹೊಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.