ADVERTISEMENT

ಶ್ರೀರಂಗಪಟ್ಟಣ: ಭಾವೈಕ್ಯದ ಬಾಬಯ್ಯ ಉತ್ಸವ ರದ್ದು

ಮುಸ್ಲಿಂ ಗುಡ್ಡಪ್ಪ ಆದಂ ಎಂಬುವರ ನಿಧನ; ಸರಳ ಆಚರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 4:56 IST
Last Updated 9 ಆಗಸ್ಟ್ 2022, 4:56 IST
ಶ್ರೀರಂಗಪಟ್ಟಣ ತಾಲ್ಲೂಕಿನ ತಡಗವಾಡಿ ಗ್ರಾಮದ ಬಾಬಯ್ಯ ದೇವಾಲಯ
ಶ್ರೀರಂಗಪಟ್ಟಣ ತಾಲ್ಲೂಕಿನ ತಡಗವಾಡಿ ಗ್ರಾಮದ ಬಾಬಯ್ಯ ದೇವಾಲಯ   

ಶ್ರೀರಂಗಪಟ್ಟಣ: ತಾಲ್ಲೂಕಿನ ತಡಗವಾಡಿ ಗ್ರಾಮದ ಬಾಬಯ್ಯ ದೇವಾಲಯದ ಮುಸ್ಲಿಂ ಗುಡ್ಡಪ್ಪ ಭಾನುವಾರ ನಿಧನರಾಗಿದ್ದು, ಮೊಹರಂ ಕಡೇ ದಿನದ ನಿಮಿತ್ತ ಪ್ರತಿ ವರ್ಷ ನಡೆಯುತ್ತಿದ್ದ ಬಾಬಯ್ಯನ ಉತ್ಸವವನ್ನು ರದ್ದುಪಡಿಸಲಾಗಿದೆ.

‘ತಡಗವಾಡಿಯ ಬಾಬಯ್ಯನ ದೇವರ ಉತ್ಸವದ ಮುಂಚೂಣಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆದಂ ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಗಾಗಿ ಈ ಬಾರಿ ಆ.9ರಂದು ನಡೆಸಲು ಉದ್ದೇಶಿಸಿದ್ದ ಬಾಬಯ್ಯನ ಉತ್ಸವ ಮಾಡದಂತೆ ಗ್ರಾಮಸ್ಥರು ಭಾನುವಾರ ಸಂಜೆ ತೀರ್ಮಾನಿಸಿದ್ದಾರೆ. ಇದೇ ದೇವಾಲಯದ ಹಿಂದೂ ಗುಡ್ಡಪ್ಪ (ಕತ್ತಿ ಬಾಬಯ್ಯನ ಗುಡ್ಡಪ್ಪ) ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆಗಳನ್ನು ನಡೆಸಲಿದ್ದಾರೆ. ದೇವಾಲಯದ ಮುಂದಿನ ಕೊಂಡಕ್ಕೆ ಕೊಬ್ಬರಿ, ಹರಳು ಹಾಕಿ ಭಕ್ತರು ಹರಕೆ ತೀರಿಸಲು ಅವಕಾಶ ಇರುತ್ತದೆ’ ಎಂದು ಮುಖಂಡ ಟಿ.ಕೆ. ಯತೀಶ್‌ ತಿಳಿಸಿದ್ದಾರೆ.

ಮೊಹರಂ ಕಡೇ ದಿನದಂದು ತಡಗವಾಡಿಯಲ್ಲಿ ಹಿಂದೂಗಳೇ ಸೇರಿ ಭಾವೈಕ್ಯತೆಯ ಬಾಬಯ್ಯ ಹಬ್ಬ ಆಚರಿಸುವ ವಿಶೇಷ ಸಂಪ್ರದಾಯ ತಲೆ ತಲಾಂತರಗಳಿಂದ ನಡೆದು ಬಂದಿದೆ. ಊರಿನ ಜನರು ಫಕೀರರ ವೇಷ ತೊಟ್ಟು, ಕತ್ತಿ ಹಿಡಿದು ಬಾಬಯ್ಯನ ಮೆರವಣಿಗೆ ಮಾಡುತ್ತಾರೆ. ಮೂರು ದಿನಗಳವರೆಗೆ ನಡೆಯುವ ಈ ಆಚರಣೆಯಲ್ಲಿ ಮುಸ್ಲಿಂ ಸಂತರ ತ್ಯಾಗ, ಬಲಿದಾನಗಳನ್ನು ಕೊಂಡಾಡುತ್ತಾರೆ. ಬಾಬಯ್ಯನ ಉತ್ಸವ ಸಾಗುವ ಮಾರ್ಗದಲ್ಲಿ, ಪ್ರತಿ ಮನೆಗಳಿಂದ ಫಕೀರರ ಮೇಲೆ ನೀರು ಸುರಿಯುವ ಪದ್ಧತಿ ಇದೆ. ಆದರೆ, ಈ ಬಾರಿ ಮುಸ್ಲಿಂ ಜನಾಂಗದ ಗುಡ್ಡಪ್ಪ ನಿಧನರಾಗಿರುವ ಹಿನ್ನೆಲೆಯಲ್ಲಿ ಹಬ್ಬ ಸರಳವಾಗಿ ನಡೆಯಲಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.