ಬೆಳಕವಾಡಿ: ರಾಜ ಬೋಪ್ಪೇಗೌಡನಪುರ (ಬಿಜಿಪುರ) ಗ್ರಾಮದ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದಲ್ಲಿ ಶುಕ್ರವಾರ ನಾಲ್ಕನೇ ಸಾರಪಂಕ್ತಿ ಸೇವೆ ನಡೆಯಿತು.
ಸಂಜೆ 5.30 ಗಂಟೆಗೆ ಪೀಠಾಧಿಪತಿ ಬಿ.ಎಸ್.ಜ್ಞಾನಾನಂದ ಚೆನ್ನರಾಜೇ ಅರಸು ಅವರು ಮಠದ ಪರಿನಾ ಅಡುಗೆ ಮನೆಯಲ್ಲಿ ತಯಾರಿಸಿದ್ದ ಬಿಳಿ ಅನ್ನದ ರಾಶಿಗೆ ಪೂಜೆ ಸಲ್ಲಿಸಿದ ನಂತರ ಮಂಟೇಸ್ವಾಮಿ ಗದ್ದುಗೆ, ಫಲಹಾರದಯ್ಯನ ಸನ್ನಿಧಿ, ಉರಿಗದ್ದುಗೆ, ಮಳವಳ್ಳಿ ಸ್ವಾಮಿ ಗದ್ದುಗೆ ಹಾಗೂ ಪಟ್ಟದ ಬಸವ ಸೇರಿದಂತೆ ತಲಾ ಮೂರು ಎಡೆ ಇಟ್ಟು ಧೂಪ ಹಾಕಿದರು. ಮಠದ ಆವರಣದಲ್ಲಿ ಮತ್ತು ರಾಜ ಬೀದಿಯ ಎರಡು ಬದಿ ಪಂಕ್ತಿಯಲ್ಲಿ ಕುಳಿತಿದ್ದ ಭಕ್ತರಿಗೆ ಬಿಳಿ ಅನ್ನ ಪ್ರಸಾದವನ್ನು ಗ್ರಾಮದ ಮುಖಂಡರು ವಿತರಿಸಿದರು.
ಬಿ.ಎಸ್.ಜ್ಞಾನಾನಂದ ಚೆನ್ನರಾಜೇ ಅರಸು ಮಠದ ಹೆಬ್ಬಾಗಿಲಿನ ರಾಜ ಬೀದಿಯ ಬಳಿ ಬಂದಾಗ ಗುರುಮನೆ ಯಜಮಾನ ಮರಿಸ್ವಾಮಿ ಜಾಗಟೆ ಬಾರಿಸಿಕೊಂಡು ‘ಅಖಂಡ ಸ್ವರೂಪ, ಆದಿ ಜ್ಯೋತಿ, ದಿವ್ಯಜ್ಯೋತಿ, ಧರ್ಮ ಗುರು ಪರಂಜ್ಯೋತಿ ಮಂಟೇಸ್ವಾಮಿ ಪಾದಕ್ಕೆ ಒಂದು ಸಾರಿ ಉಘೇ ಅನ್ನಿ’ ಎಂದು ಸಾರಪಂಕ್ತಿಯಲ್ಲಿ ಸಾರಿದರು.
ನಂತರ ಪೀಠಾಧಿಪತಿ ಹಿಂತಿರುಗಿ ಮಠ ಪ್ರವೇಶಿಸಿ ಉರಿಗದ್ದುಗೆ ಮೇಲೆ ಕುಳಿತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದರು. ನಂತರ ಭಕ್ತರು ಬಿಳಿ ಅನ್ನ ಪ್ರಸಾದವನ್ನು ತಮ್ಮ ಮನೆಗೆ ಕೊಂಡೊಯ್ದು ಸಿಹಿ ಅಡುಗೆ ಮಾಡಿ ನೀಲಗಾರರಿಗೆ ಉಣಬಡಿಸುವ ಮೂಲಕ ಸಾರಪಂಕ್ತಿ ಸೇವೆಯನ್ನು ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.