
ಮಂಡ್ಯ: ‘ರಾಜ್ಯದಲ್ಲಿ ಬೆಳೆ ಹಾನಿ ಹೆಚ್ಚಳವಿದ್ದು, ಅದನ್ನು ಮರೆಮಾಚಿ ರಾಜ್ಯ ಸರ್ಕಾರ ರೈತರಿಗೆ ಬಿಡುಗಾಸು ನೀಡಲು ಹೊರಟಿರುವ ಕ್ರಮ ಸರಿಯಿಲ್ಲ. ಹಾನಿಯಾಗಿರುವ ಪ್ರದೇಶದಲ್ಲಿ ಮರು ವೈಜ್ಞಾನಿಕ ಸಮೀಕ್ಷೆ ನಡೆಸಿ ರೈತರಿಗೆ ನ್ಯಾಯ ನೀಡಬೇಕು’ ಎಂದು ಆಗ್ರಹಿಸಿದ ಬಿಜೆಪಿ ಕಾರ್ಯಕರ್ತರು, ನಗರದಲ್ಲಿ ಮಂಗಳವಾರ ಎತ್ತಿನಗಾಡಿ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜೆ.ಸಿ.ವೃತ್ತದಲ್ಲಿ ರೈತರೊಂದಿಗೆ ಎತ್ತಿನಗಾಡಿಗಳ ಜೊತೆ ಜಮಾವಣೆಗೊಂಡು ಕಾರ್ಯಕರ್ತರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕುಮಾರ ಅವರಿಗೆ ಮನವಿ ಸಲ್ಲಿಸಿದರು.
‘ರಾಜ್ಯದಲ್ಲಿ ಶೇ 58ರಷ್ಟು ರೈತಾಪಿ ವರ್ಗವಿದೆ. ಅದರಲ್ಲಿ ಶೇ 85ರಷ್ಟು ಸಣ್ಣ ಹಿಡುವಳಿದಾರರಿದ್ದಾರೆ. ರಾಜ್ಯದ ಆರ್ಥಿಕತೆಗೆ ರೈತರೇ ಪರೋಕ್ಷವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಬಿಜೆಪಿ ತಂದಿದ್ದ ರೈತ ಪರ ಯೋಜನೆ ನಿಲ್ಲಿಸಿ ಅನ್ಯಾಯ ಮಾಡಿದೆ. ರಾಜಕೀಯ ಹಗೆತನವನ್ನು ರೈತರ ಮೇಲೆ ಸಾಧಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರದ ಮಾಹಿತಿಯ ಪ್ರಕಾರ 14.58 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದ ಬೆಳೆ ಹಾನಿಯಾಗಿದೆ. ಒಂಬತ್ತು ಜಿಲ್ಲೆಗಳಲ್ಲಿ ಬೆಳೆಹಾನಿ ಪ್ರಮಾಣ ಹೆಚ್ಚಾಗಿದೆ. ಆದರೆ ಶೇ 20ರಷ್ಟು ಪರಿಹಾರ ನೀಡಿ ರೈತರಿಗೆ ಮೋಸ ಮಾಡುತ್ತಿದೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ಬೆಳೆಹಾನಿಯ ಮರು ಸಮೀಕ್ಷೆ ಆಗಬೇಕು. ಪರಿಹಾರ ಮೊತ್ತ ಹೆಚ್ಚಿಸಬೇಕು. ಸಾಲಮನ್ನಾ ಮಾಡಬೇಕು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕೊಯ್ಲಿನ ಹಂತಕ್ಕೆ ಬಂದ ಸಂದರ್ಭದಲ್ಲಿ ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಹೆಚ್ಚು ಬೆಳೆ ನಷ್ಟ ಸಂಭವಿಸಿದೆ. ಕೃಷ್ಣ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ತೊಗರಿಬೇಳೆ, ಹೆಸರು ಕಾಳು, ಹತ್ತಿ, ಮೆಕ್ಕೆಜೋಳ ಬೆಳೆಗಳಿಗೆ ಅತಿಹೆಚ್ಚು ಹಾನಿಯಾಗಿದೆ’ ಎಂದು ದೂರಿದರು.
ಪಶ್ಚಿಮಘಟ್ಟ ಮತ್ತು ಕರಾವಳಿ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಪ್ರಾಣಿ ಮಾನವ ಸಂಘರ್ಷ, ಕಾಫಿ ಮತ್ತು ಅಡಕೆಗೆ ಕೊಳೆ, ಎಲೆ ಚುಕ್ಕೆ ರೋಗ, ಮಧ್ಯ ಕರ್ನಾಟಕದಲ್ಲಿ ಈರುಳ್ಳಿ ಮತ್ತು ನೆಲಗಡಲೆ ಬೆಳೆಗೆ ಹಾನಿ, ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಶೇ 50ರಷ್ಟು ಉತ್ಪಾದನೆಯ ಕೊರತೆ, ಬೆಂಗಳೂರು ವಿಭಾಗದ ಗ್ರಾಮಾಂತರ ವಿಭಾಗಗಳಲ್ಲಿ ಸರ್ಕಾರ ಮತ್ತು ರೈತರ ನಡುವೆ ಭೂ ವಿವಾದದ ಸಂಘರ್ಷ ಸೇರಿದಂತೆ ಹಲವು ರೈತ ವಿರೋಧಿ ನಡೆಗಳಿಂದ ಜನರು ಬೇಸತ್ತು ಹೋಗಿದ್ದಾರೆ’ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಎಸ್.ಡಿ.ಜಯರಾಮ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಆನಂದ್, ಮುಖಂಡರಾದ ಇಂಡವಾಳು ಸಚ್ಚಿದಾನಂದ, ಸಿದ್ದರಾಮಯ್ಯ, ಎಚ್.ಆರ್.ಅರವಿಂದ್, ಮಹಂತಪ್ಪ, ಪೀಹಳ್ಳಿ ರಮೇಶ್, ಯಮದೂರು ಸಿದ್ದರಾಜು, ಶಿವಕುಮಾರ್ ಆರಾಧ್ಯ, ರಘುಗೌಡ, ಸಿ.ಟಿ.ಮಂಜುನಾಥ್, ಸಿದ್ದರಾಜುಗೌಡ ಭಾಗವಹಿಸಿದ್ದರು.
ರಾಜ್ಯದಲ್ಲಿ ಸರ್ಕಾರ ದಿವಾಳಿ
ರೈತರ ಪರವಾದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿಲ್. ಸುಮಾರು 2400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ ಕಾಳಜಿ ಹೊಂದಿಲ್ಲ. ₹4 ಲಕ್ಷ ಬಜೆಟ್ ಮಂಡನೆ ಮಾಡಿದರು ಶೇ 2 ರಷ್ಟನ್ನೂ ಕೃಷಿಗೆ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ದಿವಾಳಿ ಆಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ –ಸುರೇಶ್‌ಗೌಡ ತುಮಕೂರು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.