ADVERTISEMENT

ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲ: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 3:28 IST
Last Updated 8 ಫೆಬ್ರುವರಿ 2021, 3:28 IST
ಮಳವಳ್ಳಿ ತಾಲ್ಲೂಕಿನ ಕೆಂಬೂತಗೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು
ಮಳವಳ್ಳಿ ತಾಲ್ಲೂಕಿನ ಕೆಂಬೂತಗೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು   

ಮಳವಳ್ಳಿ: ಬಿಜೆಪಿಯವರು ಬ್ರಿಟಿಷರ ಪರವಾಗಿ ಇದ್ದವರು. ಅವರು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದವರಲ್ಲ. ಹೀಗಾಗಿ ಬ್ರಿಟಿಷರಿಂದ ಬಳುವಳಿಯಾಗಿ ಬಂದ ಒಡೆದು ಆಳುವ ನೀತಿಯನ್ನು ಬಿಜೆಪಿ ಸರ್ಕಾರ ಅನುಸರಿಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಟೀಕಿಸಿದರು.

ತಾಲ್ಲೂಕಿನ ಕೆಂಬೂತಗೆರೆಯಲ್ಲಿ ನಂದಿನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರೈತರ ಹಾಗೂ ಇತರ ವಿಚಾರಗಳಲ್ಲಿ ಬ್ರಿಟಿಷರು ಏನು ಮಾಡುತ್ತಿದ್ದರೋ ಅದನ್ನೇ ಬಿಜೆಪಿ ಮುಂದುವರಿಸುತ್ತಿದೆ. ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರನ್ನು ರೈತರಲ್ಲ ಎಂದು ದಿಕ್ಕು ತಪ್ಪಿಸಲು ಹೊರಟಿದೆ ಎಂದು ಕಿಡಿಕಾರಿದರು.

ADVERTISEMENT

ರಾಜಕಾರಣದಲ್ಲಿ ಎಲ್ಲವೂ ಕಲುಷಿತಗೊಂಡಿದೆ. ರಾಷ್ಟ್ರದಲ್ಲಿ ವಿರೋಧ ಪಕ್ಷಗಳ ದಮನಕ್ಕೆ ಬಿಜೆಪಿ ಕೈ ಹಾಕಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯ ಬೆಳವಣಿಗೆಯಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದಿದ್ದು, ರೈತರ ಹೋರಾಟ ಅನಿವಾರ್ಯವಾಗಿದೆ ಎಂದರು.

ರೈತರು ರೊಚ್ಚಿಗೆದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಕೂಡಲೇ ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದರು.

ಮಾಜಿ ಸಚಿವ ಪಿ.ಎಂ ನರೇಂದ್ರ ಸ್ವಾಮಿ ಮಾತನಾಡಿ, ಮಾತನಾಡುವುದೇ ಸಾಧನೆಯಾಗಬಾರದು. ಸಾಧನೆಗಳನ್ನು ಜನತೆ ಮಾತನಾಡುವಂತಾಗಬೇಕು. ಆಗ ಮಾತ್ರ ಅಧಿಕಾರ ಪಡೆದಿದ್ದಕ್ಕೆ ಸಾರ್ಥಕತೆ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಸುಳ್ಳಿನ ಮಾತುಗಳೇ ನಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಚಂದೂಪುರ ಕೆ.ಲಿಂಗೇಗೌಡ ಪಾಪಣ್ಣ, ಸಿಪಿಐ ಟಿ.ಟಿ.ಕೃಷ್ಣೇಗೌಡ, ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ ಕೆ.ಬಸವ ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿ.ಪಂ.ಸದಸ್ಯೆ ಸುಷ್ಮಾ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಂದರರಾಜು, ಯುವ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಕುಳ್ಳಚನ್ನಂಕಯ್ಯ, ನಿರ್ದೇಶಕ ರಾದ ದ್ಯಾಪೇಗೌಡ, ಮೊಳೆದೊಡ್ಡಿ ಲಿಂಗರಾಜು, ಕೀಲಾರ ಕೃಷ್ಣೇಗೌಡ, ಪ್ರಾಧ್ಯಾಪಕ ಬಿ.ಎಸ್.ಬೋರೇಗೌಡ, ವಿಜಯದ್ಯಾಬಿ, ಟ್ರಸ್ಟ್ ಅಧ್ಯಕ್ಷ ಬಸವರಾಜು ಇದ್ದರು.

ಇದೇ ವೇದಿಕೆಯಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಟಿ.ನಂದಕುಮಾರ್, ತಾಲ್ಲೂಕು ವೈದ್ಯಾ ಧಿಕಾರಿ ಡಾ.ವೀರಭದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.